ನವದೆಹಲಿ: ಪ್ರತಿ ಮತಗಟ್ಟೆಯ ಗರಿಷ್ಠ ಮತದಾರರ ಸಂಖ್ಯೆಯನ್ನು 1,200 ರಿಂದ 1,500ಕ್ಕೆ ಹೆಚ್ಚಿಸುವ ನಿರ್ಧಾರದ ವಿರುದ್ಧದ ಅರ್ಜಿಗಳು ಇತ್ಯರ್ಥವಾಗುವವರೆಗೂ ಮತದಾನ ಪ್ರಕ್ರಿಯೆಯ ವಿಡಿಯೊ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ಸುಪ್ರೀಂ ಕೋರ್ಟ್, ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ.
ಪ್ರಕಾಶ್ ಸಿಂಗ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸಲು ಇಸಿಐ ಪರ ವಕೀಲರು ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಶುಕ್ರವಾರ ಈ ಆದೇಶ ಹೊರಡಿಸಿತು.
ಪ್ರತಿ ಮತಗಟ್ಟೆಯ ಗರಿಷ್ಠ ಮತದಾರರ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವನ್ನು ಪ್ರಶ್ನಿಸಿ ಇಂದು ಪ್ರಕಾಶ್ ಅವರು ಪಿಐಎಲ್ ಸಲ್ಲಿಸಿದ್ದಾರೆ.
'ಇಸಿಐ ಪರ ಹಾಜರಾದ ವಕೀಲರು ಪ್ರಮಾಣಪತ್ರ ಸಲ್ಲಿಸಲು ಹೆಚ್ಚಿನ ಸಮಯ ಕೋರಿದ್ದಾರೆ. ಪ್ರಮಾಣಪತ್ರ ಸಲ್ಲಿಸಲು ಇಂದಿನಿಂದ ಮೂರು ವಾರಗಳ ಕಾಲಾವಕಾಶ ನೀಡುತ್ತೇವೆ. ಈ ಅರ್ಜಿ ಇತ್ಯರ್ಥವಾಗುವವರೆಗೂ, ಈ ಮೊದಲು ಮಾಡುತ್ತಿದ್ದಂತೆಯೇ ಮತದಾನದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂರಕ್ಷಿಸಿಡುವಂತೆ ನಿರ್ದೇಶಿಸುತ್ತೇವೆ' ಎಂದು ಪೀಠವು ಹೇಳಿದೆ.
ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದಿರುವುದರ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರೂ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಜನವರಿ 15ರಂದು ಸೂಚಿಸಿತ್ತು.