ನವದೆಹಲಿ: ಹೊರಗಿನವರು ಯಾರೂ ಇಲ್ಲದ ಸಮಯದಲ್ಲಿ, ನಾಲ್ಕು ಗೋಡೆಗಳ ನಡುವೆ ನಡೆದಿರುವ ನಿಂದನೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ-ಎಸ್‌ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಆರೋಪಿಯು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರನ್ನು ಹೊರಗಿನವರು ಅಥವಾ ಸಾರ್ವಜನಿಕರು ಇರುವ ಸ್ಥಳದಲ್ಲಿ ನಿಂದಿಸಿದರೆ ಮಾತ್ರ ಅದು ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(1) (ಎಸ್) ಅಡಿಯಲ್ಲಿರುವ ಅಪರಾಧ ಎನಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಿಳಿಸಿದೆ.
'ಅರೋಪಿಯು ನಿರ್ದಿಷ್ಟ ವ್ಯಕ್ತಿಗೆ ನಿಂದಿಸಿರುವುದನ್ನು ಸಾರ್ವಜನಿಕರು ವೀಕ್ಷಿಸಿರಬೇಕು ಅಥವಾ ಅದನ್ನು ಕೇಳಿಸಿಕೊಂಡಿರಬೇಕು' ಎಂದ ಪೀಠವು, ಈ ಕಾಯ್ದೆಯಡಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿತು.
ತಿರುಚ್ಚಿಯ ಕಂದಾಯ ನಿರೀಕ್ಷಕರನ್ನು ಅವರ ಜಾತಿಯ ಹೆಸರು ಹೇಳಿ ನಿಂದಿಸಿದ ಆರೋಪವನ್ನು ಕರುಪ್ಪುದಯಾರ್ ಎಂಬವರು ಎದುರಿಸುತ್ತಿದ್ದರು. ತಂದೆ ಸಲ್ಲಿಸಿರುವ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಲು ಬಂದಿದ್ದ ಕರುಪ್ಪುದಯಾರ್ ತಮ್ಮನ್ನು ನಿಂದಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಕಂದಾಯ ನಿರೀಕ್ಷಕರು ತಮ್ಮ ಕಚೇರಿಯಲ್ಲಿದ್ದಾಗ ಅಲ್ಲಿಗೆ ಬಂದ ಆರೋಪಿ ಅರ್ಜಿಯೊಂದರ ಕುರಿತು ವಿಚಾರಿಸಿದ್ದಾರೆ. ಆದರೆ, ಅವರು ನೀಡಿದ ಉತ್ತರದಿಂದ ತೃಪ್ತಿಯಾಗಲಿಲ್ಲ. ಇದರಿಂದ ಆರೋಪಿಯು ಕಂದಾಯ ನಿರೀಕ್ಷಕರ ಜಾತಿಯ ಹೆಸರು ಹೇಳಿ ನಿಂದಿಸಿ, ಅವಮಾನಿಸಿದ್ದಾರೆ. ನಂತರ ದೂರುದಾರರ ಮೂವರು ಸಹೋದ್ಯೋಗಿಗಳು ಅಲ್ಲಿಗೆ ಬಂದು ಆರೋಪಿಯನ್ನು ಸಮಾಧಾನಪಡಿಸಿ ಅಲ್ಲಿಂದ ಕರೆದೊಯ್ದರು ಎಂಬುದನ್ನು ಪೀಠವು ಗಮನಿಸಿತು.
2021ರ ಸೆಪ್ಟೆಂಬರ್ 2ರಂದು ದಾಖಲಾಗಿರುವ ಎಫ್‌ಐಆರ್‌ನಲ್ಲಿರುವ ವಿವರಗಳ ಪ್ರಕಾರ ದೂರುದಾರರ ಕಚೇರಿಯ ನಾಲ್ಕು ಗೋಡೆಗಳ ನಡುವೆ ಈ ಘಟನೆ ನಡೆದಿದೆ. ಅವರ ಸಹೋದ್ಯೋಗಿಗಳು ಘಟನೆಯ ನಂತರ ಅಲ್ಲಿಗೆ ಬಂದಿದ್ದಾರೆ ಎಂದು ಪೀಠವು ಹೇಳಿದೆ.
'ಆದ್ದರಿಂದ, ಸಾರ್ವಜನಿಕರು ಇರುವ ಸ್ಥಳ ಎಂದು ಕರೆಯಬಹುದಾದ ಜಾಗದಲ್ಲಿ ಈ ಘಟನೆ ನಡೆದಿಲ್ಲವಾದ್ದರಿಂದ ಅಪರಾಧವು ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(1) (ಎಸ್) ಅಡಿಯಲ್ಲಿ ಬರುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತೇವೆ' ಎಂದು ಪೀಠವು ತಿಳಿಸಿತು.