ಅಯೋಧ್ಯೆ: ಉಗ್ರಗಾಮಿ ಗುಂಪುಗಳ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಸೇನೆ ಸದಾ ಹಿಂದೂಗಳನ್ನು ಬೆಂಬಲಿಸುತ್ತದೆ ಎಂದು ಪಾಕಿಸ್ತಾನದ ಅತಿದೊಡ್ಡ ಹನುಮಾನ್ ಮಂದಿರದ ಮುಖ್ಯ ಅರ್ಚಕ ಸಂತ ರಾಮನಾಥ್ ಮಿಶ್ರಾ ಬುಧವಾರ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಮಾತನಾಡಿದ ಮಿಶ್ರಾ, ಕರಾಚಿಯ ಪಂಚಮುಖಿ ಹನುಮಾನ್ ಮಂದಿರದ ಹೋರಾಟವನ್ನು ನೆನಪಿಸಿಕೊಂಡರು.
ಈ ದೇವಾಲಯ ಭಾರತದ ವಿಭಜನೆಯ ಸಮಯದಲ್ಲಿ 25,000 ಚದರ ಅಡಿಗಳಷ್ಟು ವಿಸ್ತಾರವಾಗಿತ್ತು. ದಶಕಗಳಿಂದ ದೇವಾಲಯದ ಭೂಮಿಯನ್ನು ಅತಿಕ್ರಮಿಸಲಾಗಿತ್ತು. ಆದರೆ, 2018ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ಅದರ ಜಾಗ ಮರುಪಡೆಯಲು ನೆರವಾಯಿತು ಎಂದು ಪ್ರಸ್ತುತ ದೇಶದಾದ್ಯಂತ ಹಿಂದೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಮಿಶ್ರಾ ಹೇಳಿದ್ದಾರೆ.
'ನಮ್ಮ ದೇವಾಲಯದ ಭೂಮಿಗಾಗಿ ನಾವು ಸುದೀರ್ಘ ಹೋರಾಟ ನಡೆಸಿದ್ದೇವೆ. ಅನೇಕ ಮೂಲಭೂತವಾದಿ ಗುಂಪುಗಳು ನಮ್ಮನ್ನು ವಿರೋಧಿಸಿದವು. ಆದರೆ, ನಾವು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ದೇಶ ವಿಭಜನೆಗೂ ಮೊದಲು ನಾವು ಹೊಂದಿದ್ದ ಎಲ್ಲ ಭೂಮಿಯನ್ನು ಹಿಂದಿರುಗಿಸುವಂತೆ ವಾದಿಸಿದ್ದೆವು'ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿತು. ಅಲ್ಪಸಂಖ್ಯಾತ ಹಿಂದೂ ಧಾರ್ಮಿಕ ಸ್ಥಳಗಳ ಭೂಮಿ ಹಿಂದಿರುಗಿಸಲು ಆದೆಶಿಸಿತು. ಜಿಹಾದಿ ಗುಂಪುಗಳ ವಿರುದ್ಧ ಪಾಕಿಸ್ತಾನ ಸೇನೆ ಮತ್ತು ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ತೀರ್ಪನ್ನು ತ್ವರಿತವಾಗಿ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದೇವಾಲಯದ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದಿದ್ದಾರೆ.