ರಾಯ್‌ಬರೇಲಿ: 'ಸಂವಿಧಾನ ರಚನೆಯಲ್ಲಿ ದಲಿತರ ಯೋಗದಾನ ಮಹತ್ವದ್ದು. ಆದರೆ ಇಂದು ನಿಮ್ಮನ್ನು ಎಲ್ಲೆಡೆ ತುಳಿಯುವ ವ್ಯವಸ್ಥೆ ಇದೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಅವರು ಪ್ರತಿನಿಧಿಸುವ ರಾಯ್‌ಬರೇಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ದಲಿತ ವಿದ್ಯಾರ್ಥಿಗಳೊಂದಿಗೆ ಗುರುವಾರ ಸಂವಾದ ನಡೆಸಿದ್ದಾರೆ.
'ದೇಶದ ಪ್ರಮುಖ 500 ಕಂಪನಿಗಳ ಉನ್ನತ ಸ್ಥಾನದಲ್ಲಿ ದಲಿತರಿಗೆ ಎಷ್ಟು ಸ್ಥಾನ ದೊರೆತಿದೆ ಎಂಬುದನ್ನು ಪ್ರಶ್ನಿಸಬೇಕಿದೆ' ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಯೊಬ್ಬರು, 'ನಮಗೆ ಸರಿಯಾದ ಸೌಲಭ್ಯಗಳಿಲ್ಲದ ಕಾರಣ ನಾವು ಆ ಹಂತ ತಲುಪಲು ಸಾಧ್ಯವಾಗಿಲ್ಲ' ಎಂದರು.
ಇದಕ್ಕೆ ಉತ್ತರಿಸಿದ ರಾಹುಲ್, 'ಡಾ. ಅಂಬೇಡ್ಕರ್ ಅವರಿಗೂ ಅವಕಾಶಗಳು ಇರಲಿಲ್ಲ. ಅವರ ಪರಿಶ್ರಮದ ಹಾದಿಯಲ್ಲಿ ಅವರೊಬ್ಬರೇ ಇದ್ದರು. ಹೀಗಿದ್ದರೂ ಈ ದೇಶದ ರಾಜಕೀಯವನ್ನು ಅಲುಗಾಡಿಸಿದರು' ಎಂದರು.
'ಇಡೀ ವ್ಯವಸ್ಥೆಯೇ ನಿಮ್ಮ ವಿರುದ್ಧವಿದೆ. ನಿಮ್ಮ ಬೆಳವಣಿಗೆ ಈ ವ್ಯವಸ್ಥೆಗೆ ಬೇಕಾಗಿಲ್ಲ. ಪ್ರತಿನಿತ್ಯ ಈ ವ್ಯವಸ್ಥೆ ನಿಮ್ಮ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಆ ದಾಳಿ ನಿಮ್ಮ ಮೇಲೆ ಹೇಗೆ ನಡೆಯಿತು ಎಂಬುದನ್ನು ತಿಳಿಯಲು ನಿಮಗೆ ಬಹುಕಾಲ ಬೇಕಾಗಬಹುದು' ಎಂದು ರಾಹುಲ್ ಹೇಳಿದ್ದಾರೆ.
'ಸಂವಿಧಾನದ ಸಿದ್ಧಾಂತವೇ ನಿಮ್ಮ ಸಿದ್ಧಾಂತ ಎನ್ನುವುದನ್ನು ನೀವು ಮೊದಲ ಅರ್ಥ ಮಾಡಿಕೊಳ್ಳಬೇಕು. ಈ ದೇಶದಲ್ಲಿ ದಲಿತರೇ ಇರದಿದ್ದರೆ ಇಂಥ ಬಲಿಷ್ಠ ಸಂವಿಧಾನ ರಚನೆಯೂ ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನಾನು ದೃಢವಾಗಿ ಹೇಳಬಲ್ಲೆ. ಹೀಗಾಗಿ ಇದು ನಿಮ್ಮ ಸಿದ್ಧಾಂತ, ನಿಮ್ಮ ಸಂವಿಧಾನ. ಹೀಗಿದ್ದರೂ ನಿಮ್ಮನ್ನು ನಿತ್ಯ ತುಳಿಯವ ವ್ಯವಸ್ಥೆ ಇರುವುದೇ ವಿಪರ್ಯಾಸ' ಎಂದು ಕಳವಳ ವ್ಯಕ್ತಪಡಿಸಿದರು.