ಜೊಹಾನೆಸ್‌ಬರ್ಗ್: ಭಾರತದ ಅಭಿವೃದ್ಧಿ ನೀತಿಗಳು ಇತರ ದೇಶಗಳಿಗೆ ಮಾದರಿಯಾಗಬಲ್ಲವು ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅವರು ಮಂಗಳವಾರ ಹೇಳಿದರು.
'ಅಧಿಕ ಜನಸಂಖ್ಯೆ ಇರುವ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿದೆ.
ಪ್ರಜಾಸತ್ತಾತ್ಮಕ ರಾಜಕೀಯ ಮತ್ತು ಒಕ್ಕೂಟ ಸರ್ಕಾರ ವ್ಯವಸ್ಥೆಯ ಚೌಕಟ್ಟಿನಲ್ಲೇ ಇದನ್ನು ಸಾಧಿಸಲು ಸಾಧ್ಯವಾಗಿದೆ. ಈ ಕಾರಣಗಳಿಂದಾಗಿ ಭಾರತದ ಅಭಿವೃದ್ಧಿ ನೀತಿಗಳು ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ರಾಷ್ಟ್ರಗಳಿಗೆ ಮಾದರಿಯಾಗಿವೆ' ಎಂದು ವಿಚಾರಸಂಕಿರಣವೊಂದರಲ್ಲಿ ತಿಳಿಸಿದರು.
'ಹೊಸ ಅವಕಾಶಗಳು ಮತ್ತು ಇತರ ದೇಶಗಳು ಅಳವಡಿಸಿಕೊಳ್ಳಬಹುದಾದ ಸಾರ್ವಜನಿಕ ನೀತಿಗಳನ್ನು ರಚಿಸುವ ದೇಶವಾಗಿ ಭಾರತ ಹೊರಹೊಮ್ಮಿದೆ. ಮೂರು ಟ್ರಿಲಿಯನ್ ಆರ್ಥಿಕತೆಯ ದೇಶವಾಗಿರುವ ಭಾರತ ಮುಂದಿನ 25 ವರ್ಷಗಳಲ್ಲಿ 13 ಟ್ರಿಲಿಯನ್ ಆರ್ಥಿಕ ಶಕ್ತಿಯ ರಾಷ್ಟ್ರವಾಗಲಿದೆ. ಇದು ವಿಕಸಿತ ಭಾರತದ ಮಹತ್ವಾಕಾಂಕ್ಷೆಯಾಗಿದೆ' ಎಂದು ನಾಗೇಶ್ವರನ್ ಹೇಳಿದರು.
ಭಾರತೀಯ ಹೈಕಮಿಷನ್, ಜೊಹಾನೆಸ್‌ಬರ್ಗ್‌ನಲ್ಲಿರುವ ಕಾನ್ಸುಲೇಟ್ ಜನರಲ್ ಮತ್ತು ಸಿಐಐ ಇಂಡಿಯಾ ಬಿಸಿನೆಸ್ ಫೋರಂ (ದಕ್ಷಿಣ ಆಫ್ರಿಕಾದಲ್ಲಿ ಹೂಡಿಕೆ ಮಾಡಿದ 150ಕ್ಕೂ ಹೆಚ್ಚು ಭಾರತೀಯ ಕಂಪನಿಗಳ ಪ್ರತಿನಿಧಿ) ಜಂಟಿಯಾಗಿ ವಿಚಾರಸಂಕಿರಣವನ್ನು ಆಯೋಜಿಸಿದ್ದವು.