ಹಮೀರ್‌ಪುರ: ಹಿಮಾಚಲ ಪ್ರದೇಶದ ಸುಜನ್‌ಪುರ ತಿರಾ ಪಟ್ಟಣದಲ್ಲಿನ ಮಸೀದಿ ಎದುರು ಮಹಾರಾಣಾ ಪ್ರತಾಪ್ ಅವರ ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಿರುವ ಸ್ಥಳೀಯ ಆಡಳಿತದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಮುಸ್ಲಿಂ ಸಂಘಟನೆ ಹಿಂಪಡೆದಿದೆ.
ನಗರ ಘಟಕದ ಕಾರ್ಯನಿರ್ವಾಹಕ ಅಧಿಕಾರಿ ಅಜ್ಮೇರ್ ಠಾಕೂರ್ ಅವರು ಈ ಮಾಹಿತಿ ಹಂಚಿಕೊಂಡಿದ್ದು, 'ಪ್ರತಿಮೆ ಸ್ಥಾಪನೆಯ ಕ್ರಮವನ್ನು ಮುಸ್ಲಿಂ ಸುಧರ್ ಸಭಾ ಬೆಂಬಲಿಸಿದೆ. ಈ ಕಾರ್ಯಕ್ರಮದಲ್ಲಿ ಸಭಾದ ಕೆಲ ಸದಸ್ಯರೂ ಪಾಲ್ಗೊಳ್ಳಲಿದ್ದಾರೆ' ಎಂದಿದ್ದಾರೆ.
ಇದಕ್ಕೂ ಪೂರ್ವದಲ್ಲಿ ಪಟ್ಟಣದ ವಾರ್ಡ್ ಸಂಖ್ಯೆ 4ರಲ್ಲಿರುವ ಮಸೀದಿ ಎದುರಿನ ಉದ್ಯಾನದಲ್ಲಿ ಮಹಾರಾಣಾ ಪ್ರತಾಪ್ ಅವರ ಪ್ರತಿಮೆ ಸ್ಥಾಪಿಸದಂತೆ ಮುಸ್ಲಿಂ ಸಮುದಾಯದ ವತಿಯಿಂದ ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ತನ್ನ ನಿರ್ಧಾರದಿಂದ ಹಿಂದೆ ಸರಿಯದಂತೆ ವಿಶ್ವ ಹಿಂದೂ ಪರಿಷದ್ ಆಡಳಿತಕ್ಕೆ ತಾಕೀತು ಮಾಡಿತ್ತು. ಪಟ್ಟಣವು ಅಭಿವೃದ್ಧಿ ಕಾಣುತ್ತಿದ್ದು, ಇಂಥ ಸಂದರ್ಭದಲ್ಲಿ ವಿವಾದ ಸ್ವರೂಪ ಪಡೆಯುತ್ತಿರುವ ಈ ವಿಷಯವನ್ನು ಬಗೆಹರಿಸುವಂತೆ ಉಪ ವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದರು.
'ಸುಧರ್ ಸಭಾ, ನಿಜಾಮುದ್ದೀನ್ ಮತ್ತು ಸಮಿತಿಯ ಸದಸ್ಯರು ಬುಧವಾರ ಕಚೇರಿಗೆ ಬಂದು, ಪ್ರತಿಮೆ ಸ್ಥಾಪನೆಗೆ ತಮ್ಮ ಬೆಂಬಲವಿದೆ. ಜತೆಗೆ ಸಮುದಾಯದ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆಕ್ಷೇಪಣೆ ವ್ಯಕ್ತಪಡಿಸಿರುವ ಪತ್ರವನ್ನು ಹಿಂಪಡೆಯುವುದಾಗಿಯೂ ತಿಳಿಸಿದರು' ಎಂದು ಉಪ ವಿಭಾಗಾಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
'ಎಲ್ಲಿ ನಿರ್ಧಾರವಾಗಿತ್ತೋ ಅಲ್ಲಿಯೇ ಪ್ರತಿಮೆ ಸ್ಥಾಪನೆಯಾಗಲಿದೆ. ಭಾರತದ ವೀರಯೋಧನ ಪ್ರತಿಮೆಯನ್ನು ಮಸೀದಿ ಎದುರು ಸ್ಥಾಪಿಸುವುದನ್ನು ವಿರೋಧಿಸಲು ಸಕಾರಣಗಳಿಲ್ಲ. ಹಿಂದೂ ವಿರೋಧಿ ಭಾವನೆ ಸೃಷ್ಟಿಸುವುದು ಈ ವಿರೋಧದ ಹಿಂದಿನ ಯೋಜನೆಯಾಗಿದೆ' ಎಂದು ವಿಎಚ್‌ಪಿಯ ರಾಜ್ಯ ಘಟಕದ ಉಪ ಕಾರ್ಯದರ್ಶಿ ಪಂಕಜ್ ಭಾರತೀಯ ಹೇಳಿದ್ದಾರೆ.
'ಮಹಾರಾಣಾ ಪ್ರತಾಪ್ ಅವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಎಲ್ಲಾ ಹಿಂದೂಗಳು ಸೇರಿ ಒಗ್ಗಟ್ಟು ಪ್ರದರ್ಶಿಸಬೇಕು. ಶಾಂತಿ ಮತ್ತು ಸೋದರತ್ವ ಪ್ರದರ್ಶಿಸಲು ಮುಸ್ಲಿಮರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು' ಎಂದಿದ್ದಾರೆ.