ಪೆರ್ಲ: ಪಾಣಾಜೆ ಅರ್ದಮೂಲೆಯಿಂದ ಕಾಟುಕುಕ್ಕೆ ಅಡ್ಕಸ್ಥಳ ಮೂಲಕ ಚೆರ್ಕಳ ಕಲ್ಲಡ್ಕ ಹೆದ್ದಾರಿ ಸಂಪರ್ಕಿಸುವ ಕೆ.ಕೆ. ರೋಡ್ (ಕಾಟುಕುಕ್ಕೆ ರಸ್ತೆ)ನಲ್ಲಿ ಧೂಳಿನ ಸಮಸ್ಯೆ ತೀವ್ರಗೊಂಡು ಸಂಕಷ್ಟ ಸೃಷ್ಟಿಯಾಗಿದೆ.
ರಾತ್ರಿಯ ಮಂಜಿನ ಹನಿ, ಹಗಲಿನ ಬಿಸಿಲಿಗೆ ಪೌಡರ್ ನಂತಾದ ಧೂಳಿನ ಮೇಲೆ ವಾಹನಗಳು ಹಾದು ಹೋಗುವಾಗ ಹಿಂಬದಿ ವಾಹನಗಳು, ಪಾದಚಾರಿಗಳಿಗೆ ಧೂಳಿನ ಸಿಂಚನವಾಗುತ್ತಿದೆ. ಅರ್ದಮೂಲೆಯಿಂದ ಪಿಲಿಂಗಲ್ಲು ದಂಬೆಕ್ಕಾನ ತನಕದ ರಸ್ತೆ ಬದಿಯ ಮನೆಗಳಲ್ಲಿ ಧೂಳಿನಿಂದ ಕೆಮ್ಮು, ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ತಿಂಗಳು ಕಾಟುಕುಕ್ಕೆ ದೇವಳದ ಷಷ್ಠಿ ಮಹೋತ್ಸವದ ಸಂದರ್ಭ ರಸ್ತೆ ಹೊಂಡಕ್ಕೆ ಮಣ್ಣು ಹಾಕಿ ಮುಚ್ಚಲಾಗಿತ್ತು. ಕರ್ನಾಟಕ ಭಾಗದ ರಸ್ತೆ ಅಗಲೀಕರಣ ಸಂದರ್ಭದ ಮಣ್ಣು, ರಸ್ತೆಗೆ ಸಮಾಂತರವಾಗಿ ನಿರ್ನಿಸಿದ ಹೊಸ ರಸ್ತೆಯ ಮಣ್ಣು ರಸ್ತೆಯಲ್ಲಿ ತುಂಬಿದೆ. ರಸ್ತೆಯ ಸಂಪೂರ್ಣ ದುರಸ್ತಿ ಸಾದ್ಯವಾಗದಿದ್ದರೆ ಪಿಲಿಂಗಲ್ಲು ಹಾಗೂ ಕೊಲ್ಯ ಬಜಕ್ಕುರೆಯ ಹೊಂಡಗಳನ್ನಾದರೂ ಮುಚ್ಚುವ ಕ್ರಮಕೈಗೊಳ್ಳುವಂತೆ ಸ್ಥಳೀಯರು, ರಸ್ತೆ ಫಲಾನುಭವಿಗಳು ಒತ್ತಾಯಿಸಿದ್ದಾರೆ.