ನಾಗರಕರ್ನೂಲ್ : ಜಿಲ್ಲೆಯ ದೋಮಲಪೆಂಟ ಗ್ರಾಮದ ಬಳಿ ನಿರ್ಮಾಣ ಹಂತದ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್‌ಎಲ್‌ಬಿಸಿ) ಕುಸಿದಿದ್ದು, ಸಿಲುಕಿರುವ ಸಿಬ್ಬಂದಿ ರಕ್ಷಣಾ ಕಾರ್ಯ ಮುಂದುವರಿದಿದೆ. ಈ ನಡುವೆ ದಕ್ಷಿಣ ಮಧ್ಯ ರೈಲ್ವೆಯು ಅಗತ್ಯ ನೆರವಿನೊಂದಿಗೆ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪ್ಲಾಸ್ಮಾ ಕಟ್ಟರ್ ಮತ್ತು ಬ್ರೋಚೊ ಕಟಿಂಗ್ ಮೆಷಿನ್‌ನಂತಹ ಉಪಕರಣಗಳನ್ನು ಬಳಸಿಕೊಂಡು ಭಾರ ಲೋಹಗಳನ್ನು ಕತ್ತರಿಸುವಲ್ಲಿ ರೈಲ್ವೆ ಪರಿಣತಿಯನ್ನು ಹೊಂದಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯ(ಎಸ್‌ಸಿಆರ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿರುವ ಕಬ್ಬಿಣ ಮತ್ತು ಉಕ್ಕಿನಂತಹ ಅವಶೇಷಗಳನ್ನು ತೆರವುಗೊಳಿಸುವ ಮೂಲಕ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕಾರ ನೀಡುವಂತೆ ನಾಗರ್ ಕರ್ನೂಲ್ ಜಿಲ್ಲಾಧಿಕಾರಿ ಅವರು ಮಧ್ಯ ರೈಲ್ವೆಯ ಸಹಾಯವನ್ನು ಕೋರಿದರು ಎಂದು ತಿಳಿಸಿದ್ದಾರೆ.
'ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದ್ದು, ಎರಡು ದಿನಗಳಲ್ಲಿ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ ಎಂದು ತೆಲಂಗಾಣ ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ಗುರುವಾರ ತಿಳಿಸಿದ್ದರು.
'ಫೆ.22ರಂದು ಬೆಳಿಗ್ಗೆ ಸುರಂಗದ ಒಳ ಹೋದಾಗ ಛಾವಣಿಯ ಒಂದು ಭಾಗದಿಂದ ನೀರು ಸೋರಲು ಆರಂಭಿಸಿತು. ಸಡಿಲವಾದ ಮಣ್ಣು ಕೂಡಾ ಬೀಳಲು ಶುರುವಾಯಿತು. ಅಪಾಯ ಅರಿತ ನಾವು ತಕ್ಷಣವೇ ಹೊರಗೆ ಓಡಿ ಬಂದೆವು. ಆದರೆ ಎಂಟು ಮಂದಿಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ' ಎಂದು ನಡೆದ ಘಟನೆಯನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.