HEALTH TIPS

ವಯನಾಡ್ ಪುನರ್ವಸತಿಗೆ ಕೇಂದ್ರದ ಸಾಲ: ಷರತ್ತುಗಳು 'ಭಯಂಕರ' ಮತ್ತು 'ಕ್ರೂರ ತಮಾಷೆ'‌ ಎಂದ ಸಚಿವ ರಾಜನ್

Top Post Ad

Click to join Samarasasudhi Official Whatsapp Group

Qries

 ತ್ರಿಶೂರು:  ವಯನಾಡ್ ಪುನರ್ವಸತಿಗಾಗಿ ಕೇಂದ್ರವು ಮಂಜೂರು ಮಾಡಿರುವ 529.50 ಕೋಟಿ ರೂ.ಗಳ ಸಾಲವು 'ಭಯಂಕರ' ಮತ್ತು 'ಕ್ರೂರ ತಮಾಷೆ'ಯಾಗಿರುವ ಷರತ್ತುಗಳನ್ನು ಹೊಂದಿದೆ ಎಂದು ಕೇರಳದ ಕಂದಾಯ ಸಚಿವ ಕೆ.ರಾಜನ್ ಅವರು ಶನಿವಾರ ಇಲ್ಲಿ ಹೇಳಿದರು. ಇದು ವಯನಾಡ್ ಮತ್ತು ಕೇರಳದಲ್ಲಿಯ ಭೂಕುಸಿತ ಸಂತ್ರಸ್ತರ ಕುರಿತು ಕೇಂದ್ರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎನ್ನುವುದನ್ನು ಸೂಚಿಸುತ್ತಿದೆ ಎಂದೂ ಅವರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,ಕೇರಳವು ಅರ್ಹವಾಗಿರುವ ಬೇಷರತ್ ಆರ್ಥಿಕ ನೆರವನ್ನು ಒದಗಿಸುವ ಬದಲು ಕೇಂದ್ರವು ಮಾರ್ಚ್ 31ರೊಳಗೆ ಸಂಪೂರ್ಣ ಮೊತ್ತದ ಬಳಕೆ ಸೇರಿದಂತೆ ಕಠಿಣ ಷರತ್ತುಗಳೊಂದಿಗೆ ಸಾಲವನ್ನು ಮಾತ್ರ ನೀಡಿದೆ. ಸಾಲದ ಷರತ್ತುಗಳು ಭಯಂಕರವಾಗಿವೆ. ಸಂಪೂರ್ಣ ಮೊತ್ತವನ್ನು ಮುಂದಿನ 45 ದಿನಗಳಲ್ಲಿ,ಮಾ.31ರೊಳಗೆ ಬಳಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿರುವುದು ಕ್ರೂರ ತಮಾಷೆಯಾಗಿದೆ ಎಂದು ಹೇಳಿದರು.

ಈ ನಡುವೆ ವಯನಾಡಿನಲ್ಲಿ ಟಿವಿ ವಾಹಿನಿಯೊಂದಕ್ಕೆ ಮಾತನಾಡಿದ ಕೆಲವು ಸಂತ್ರಸ್ತರು 'ಈ ಬೆಳವಣಿಗೆಯಿಂದ ನಾವು ನಿರಾಶರಾಗಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ನಮ್ಮನ್ನು ಚೆಂಡಿನಂತೆ ಒಂದು ಅಂಗಳದಿಂದ ಇನ್ನೊಂದು ಅಂಗಳಕ್ಕೆ ಎಸೆಯುತ್ತಿವೆ. ಪ್ರಧಾನಿಯವರು ಇಲ್ಲಿಗೆ ಭೇಟಿ ನೀಡಿ ಎಲ್ಲ ಸಹಾಯವನ್ನು ಒದಗಿಸುವುದಾಗಿ ಆಶ್ವಾಸನೆ ನೀಡಿದಾಗ ನಮ್ಮಲ್ಲಿ ಹೆಚ್ಚಿನ ಭರವಸೆಗಳು ಮೂಡಿದ್ದವು. ಆದರೆ ಕೇಂದ್ರ ಸರಕಾರವು ರಾಜ್ಯಕ್ಕೆ ಕೇವಲ ಸಾಲವನ್ನು ನೀಡಿದೆ. ಪ್ರತಿಭಟನೆ ಮತ್ತು ಆಂದೋಲನಗಳನ್ನು ನಡೆಸುವುದನ್ನು ಬಿಟ್ಟರೆ ನಮಗೆ ಬೇರೆ ದಾರಿಯಿಲ್ಲ ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ರಾಜ್ಯದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ ಅವರು,ಮಾ.31ರೊಳಗೆ ಸಾಲದ ಹಣವನ್ನು ಬಳಸಿಕೊಳ್ಳಬೇಕು ಎಂಬ ಷರತ್ತು ದೊಡ್ಡ ಪ್ರಾಯೋಗಿಕ ಸಮಸ್ಯೆಯಾಗಿದೆ ಎಂದು ಬಣ್ಣಿಸಿದ್ದರು.

'ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆ 2024-15'ರಡಿ ಸಾಲಗಳಿಗೆ ವಿಧಿಸಲಾಗಿರುವ ಷರತ್ತುಗಳು ಬಿಡುಗಡೆಗೊಳಿಸಲಾದ ಮೊತ್ತವನ್ನು ಹತ್ತು ಕೆಲಸದ ದಿನಗಳಲ್ಲಿ ಅನುಷ್ಠಾನ ಸಂಸ್ಥೆಗಳಿಗೆ ರವಾನಿಸುವುದನ್ನೂ ಅಗತ್ಯವಾಗಿಸಿವೆ. ಈ ಅವಧಿಯನ್ನು ಮೀರಿ ಯಾವುದೇ ವಿಳಂಬವಾದರೆ ರಾಜ್ಯವು ಬಿಡುಗಡೆಗೊಂಡ ಹಣಕ್ಕೆ ಕೇಂದ್ರಕ್ಕೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅವರೂ ಕೇಂದ್ರದ ನಿರ್ಧಾರವನ್ನು ಟೀಕಿಸಿದ್ದು,ಸಾಲದ ಮೊತ್ತವನ್ನು ಮಾ.31ರೊಳಗೆ ಬಳಸಬೇಕು ಎಂಬ ಷರತ್ತು ಅಪ್ರಾಯೋಗಿಕವಾಗಿದೆ ಎಂದಿದ್ದಾರೆ.

16 ಯೋಜನೆಗಳಿಗೆ ಮಾ.31ರೊಳಗೆ ಬಳಸಬೇಕಾದ 50 ವರ್ಷಗಳ ಬಡ್ಡಿರಹಿತ ಸಾಲವನ್ನು ನಿಡುವ ಮೂಲಕ ಕೇಂದ್ರವು ಕೇರಳಕ್ಕೆ ನೆರವಾಗುವ ಸೋಗಿನಲ್ಲಿ ಅದರ ಉಸಿರುಗಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಾಲವನ್ನು ಮಂಜೂರು ಮಾಡಲಾಗಿರುವ ಯೋಜನೆಗಳಲ್ಲಿ ಯಾವುದೇ ಅನಿವಾರ್ಯ ಬದಲಾವಣೆಗಳಿಗೆ ರಾಜ್ಯವು ಕೇಂದ್ರದಿಂದ ಅನುಮೋದನೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎನ್ನುವುದೂ ಈ ಷರತ್ತುಗಳಲ್ಲಿ ಸೇರಿದೆ.

ಉದ್ದೇಶಿತ ಬಳಕೆಯನ್ನು ಹೊರತುಪಡಿಸಿ ಇತರ ಯಾವುದೇ ಉದ್ದೇಶಕ್ಕೆ ಸಾಲದ ಹಣ ಬಳಕೆಯಾದರೆ ನಂತರದ ಅವಧಿಗಳಲ್ಲಿ ರಾಜ್ಯಕ್ಕೆ ಪಾವತಿಸಲಾಗುವ ತೆರಿಗೆ ಪಾಲಿನಲ್ಲಿ ಕಡಿತಗೊಳಿಸಲಾಗುವುದು ಎಂದೂ ಕೇಂದ್ರವು ಹೇಳಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries