ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ನೀತಾ ಅಂಬಾನಿ ಅವರು, ಯಾವ ತಂದೆ-ತಾಯಿಗೆ ಆಗಲಿ ತಮ್ಮ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂಬ ಕನಸಿರುತ್ತದೆ.
ದೇವರ ದಯೆಯಿಂದ ಅದು ನೆರವೇರಿತು ಎಂದು ಹೇಳಿದ್ದಾರೆ.
ಬ್ಲೂಮ್‌ಬರ್ಗ್ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. 'ಅನಂತ್ ಅವರ ಅದ್ಧೂರಿ ಮದುವೆಯ ಬಗ್ಗೆ ಟೀಕೆಗಳನ್ನು ಕೇಳಿ ನಿಮಗೆ ಬೇಸರ ಎನಿಸಿತ್ತೆ' ಎಂದು ಅವರಿಗೆ ಪ್ರಶ್ನೆ ಎದುರಾಗಿತ್ತು.
'ನಮ್ಮ ಕನಸು ಈಡೇರಿದ್ದಲ್ಲದೇ ಈ ಮದುವೆ ಮೇಡ್ ಇನ್ ಇಂಡಿಯಾ ಬ್ರ್ಯಾಂಡ್‌ನ ಪರಿಕಲ್ಪನೆ. ಆ ಪರಿಕಲ್ಪನೆ ಯಶಸ್ವಿಯಾಯಿತು. ಮದುವೆಯಲ್ಲಿ ಭಾರತೀಯ ಶ್ರೀಮಂತ ಪರಂಪರೆ ರಾರಾಜಿಸಿತು. ಆ ಬಗ್ಗೆ ಹೆಚ್ಚೆನೂ ಹೇಳುವುದಿಲ್ಲ' ಎಂದಿದ್ದಾರೆ.
'ಅಸ್ತಮಾ ಇದ್ದಿದ್ದರಿಂದ ಮಗ ಅನಂತ್‌ನಿಗೆ ಬಾಲ್ಯದಲ್ಲಿಯೇ ಸ್ಥೂಲಕಾಯ ಆವರಿಸಿಕೊಂಡಿತು. ಆದರೂ ಅವನು ಚಿಂತೆ ಮಾಡಲಿಲ್ಲ. ನಾನು ಹೊರಗೆ ಹೇಗೆ ಕಾಣುತ್ತೇನೆ ಎಂಬುದು ಮುಖ್ಯವಲ್ಲ ಅಮ್ಮಾ, ನನ್ನ ಒಳಗಿನ ಹೃದಯ ಹೇಗಿದೆ ಎಂಬುದು ಮುಖ್ಯವೆಂದು ಹೇಳಿ ಹಸೆಮಣೆ ಏರಿದಾಗ ನಮಗಾದ ಆನಂದ ಅಷ್ಟಿಷ್ಟಲ್ಲ' ಎಂದು ಹೇಳಿದ್ದಾರೆ.
ಕಳೆದ ವರ್ಷ ಜುಲೈ 12 ರಂದು ಅನಂತ್ ಅಂಬಾನಿ ಅವರು ರಾಧಿಕಾ ಮರ್ಚಂಟ್ ಅವರನ್ನು ವರಿಸಿದ್ದರು. ಈ ಮದುವೆಗೆ ಸುಮಾರು ₹5 ಸಾವಿರ ಕೋಟಿ ಖರ್ಚಾಗಿದೆ ಎಂದು ಹೇಳಲಾಗಿದೆ.