ನೀವು ಬೆಳಗ್ಗಿನ ತಿಂಡಿಗೆ ಎಷ್ಟು ಬಗೆಯಲ್ಲಿ ದೋಸೆ ಮಾಡಿ ಸವಿದಿರುತ್ತೀರಿ. ಅದರಲ್ಲೂ ಅದ್ಭುತ ರುಚಿಯಲ್ಲಿ ಹಲವು ಬಗೆಯ ದೋಸೆ ನಿಮ್ಮ ನಿತ್ಯದ ಬ್ರೇಕ್‌ಫಾಸ್ಟ್ ರುಚಿ ಹೆಚ್ಚಿಸಿರಬಹುದು. ಹಾಗೆ ದೋಸೆ ಅಂದ್ರೆ ಎಲ್ಲರು ಇಷ್ಟಪಟ್ಟು ಸವಿಯುವ ತಿಂಡಿ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ, ಹೋಟೆಲ್‌ನಲ್ಲಂತು ದೋಸೆಗಿರುವಷ್ಟು ಬೇಡಿಕೆ ಮತ್ಯಾವ ತಿಂಡಿಗೂ ಇರುವುದು ನೋಡುವುದು ಅಪರೂಪ. ಹಾಗೆ ಬಗೆ ಬಗೆ ದೋಸೆ ಅಂದರೆ ಕೂಡ ಎಲ್ಲರ ಬಾಯಲ್ಲಿ ನೀರು ಬರುತ್ತೆ.
ಇಂತಹ ವಿಶೇಷ ಹಾಗೂ ವಿಭಿನ್ನ ದೋಸೆಯ ಪಟ್ಟಿಯಲ್ಲಿ ನಾವಿಂದು ಅದ್ಭುತ ರುಚಿ ನೀಡುವಂತಹ ರೇಷನ್ ಅಕ್ಕಿ ಹಾಗೂ ತೆಂಗಿನಕಾಯಿಯ ಬಳಸಿ ಮಾಡುವ ಮೃದುವಾದ ರುಚಿ ರುಚಿಯ ದೋಸೆ ಕುರಿತು ತಿಳಿದುಕೊಳ್ಳೋಣ. ದೋಸೆಗೆ ಉದ್ದು, ಮೆಂತ್ಯ ಹಾಕಿ ಮಾಡುವುದು ಸಾಮಾನ್ಯ, ಆದ್ರೆ ನಾವಿಂದು ರೇಷನ್ ಅಕ್ಕಿ ಹಾಗೂ ತೆಂಗಿನಕಾಯಿ ಬಳಸಿ ಮಾಡುವ ಈ ದೋಸೆ ಕುರಿತು ತಿಳಿಯೋಣ.ಈ ದೋಸೆ ಮಾಡಲು ಹೆಚ್ಚು ವಸ್ತುಗಳು ಕೂಡ ಬೇಕಾಗಿಲ್ಲ ಹಾಗೆ ಹೆಚ್ಚು ಸಮಯವೂ ಹಿಡಿಯುವುದಿಲ್ಲ. ಸುಲಭವಾಗಿ ಬೆಳಗ್ಗಿನ ತಿಂಡಿಗೆ ಮಾಡಿ ಸವಿಯಬಹುದು. ಸವಿಯಲು ಬಹಳ ಮೃದುವಾಗಿ ಹಾಗೆ ರುಚಿಕರವಾಗಿರುತ್ತೆ. ಹಾಗಾದ್ರೆ ಈ ದೋಸೆಯನ್ನು ಮಾಡೋದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ತೆಂಗಿನಕಾಯಿ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
- ರೇಷನ್ ಅಕ್ಕಿ- 2 ಕಪ್
- ತೆಂಗಿನಕಾಯಿ
- ಎಣ್ಣೆ
- ಮೆಂತ್ಯ
- ಉಪ್ಪು
ತೆಂಗಿನಕಾಯಿ ದೋಸೆ ಮಾಡುವ ವಿಧಾನವೇನು?
ಒಂದು ಬೌಲ್‌ಗೆ 2 ಕಪ್ ರೇಷನ್ ಅಕ್ಕಿ ಹಾಕಿಕೊಳ್ಳಿ. ಹಾಗೆ ಇದಕ್ಕೆ ಮೆಂತ್ಯ ಕೂಡ ಹಾಕಿ ಚೆನ್ನಾಗಿ ತೊಳೆದುಕೊಂಡು ನೀರಿನಲ್ಲಿ ನೆನೆಸಿಡಬೇಕು. ಇನ್ನೊಂದು ಬೌಲ್‌ಗೆ ಅವಲಕ್ಕಿ ಹಾಕಿ ಅದನ್ನು ಕೂಡ ತೊಳೆದು ನೆನೆಸಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಒಂದು ಕಪ್ ತೆಂಗಿನ ಕಾಯಿ ತೆಗೆದುಕೊಂಡು ಅದನ್ನು ರುಬ್ಬಿ ನಂತರ ನೆನೆಸಿಟ್ಟ ಅವಲಕ್ಕಿ ಕೂಡ ಇದರ ಜೊತೆಗೆ ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
ಸ್ವಲ್ಪ ನೀರು ಕೂಡ ಹಾಕಿ ರುಬ್ಬಿಕೊಂಡು ಹಿಟ್ಟು ಮಾಡಿ ಅದನ್ನು ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ. ಈಗ ಅಕ್ಕಿ ಹಾಗೂ ಮೆಂತ್ಯಯನ್ನು ಕೂಡ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಸ್ವಲ್ಪ ನೀರು ಹಾಕಿ ರುಬ್ಬಿ ಈ ಹಿಟ್ಟನ್ನು ಕೂಡ ಅದೇ ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಹಿಟ್ಟನ್ನು ಮುಚ್ಚಳ ಮುಚ್ಚಿ ಒಂದು ರಾತ್ರಿ ಹಾಗೆಯೆ ಬಿಡಿ. ಇದು ಉಬ್ಬಿ ಬರಬೇಕು ಮಾರನೆ ದಿನ ಬೆಳಗ್ಗೆ ಮುಚ್ಚಳ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನಂತರ ದೋಸೆ ಕಾವಲಿ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸೆಟ್ ದೋಸೆಗೆ ಹಿಟ್ಟು ಹಾಕಿಕೊಳ್ಳುವಂತೆ ಹಾಕಿಕೊಂಡು ಮೇಲೆ ಎಣ್ಣೆ ಹಾಕಿ ಎರಡು ಬದಿಯೂ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರೇಷನ್ ಅಕ್ಕಿ ಹಾಗೂ ತೆಂಗಿನಕಾಯಿ ದೋಸೆ ರೆಡಿಯಾಗುತ್ತೆ.