HEALTH TIPS

ಅಂಬೇಡ್ಕರ್‌, ಭಗತ್‌ ಸಿಂಗ್‌ ಭಾವಚಿತ್ರ ತೆರವು ವಿವಾದ: ಬಿಜೆಪಿ, ಎಎಪಿ ಜಟಾಪಟಿ

ನವದೆಹಲಿ: ದೆಹಲಿ ವಿಧಾನಸಭೆ ಅಧಿವೇಶನದ ಮೊದಲ ದಿನವೇ ಭಾವಚಿತ್ರ ತೆರವು ವಿಚಾರ ಬಿಜೆಪಿ ಹಾಗೂ ಆಮ್‌ಆದ್ಮಿ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿಗೆ ವೇದಿಕೆಯಾಯಿತು.

ನೂತನ ಸ್ಪೀಕರ್‌ ಅಭಿನಂದಿಸಿ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಆತಿಶಿ, 'ದಲಿತ ಹಾಗೂ ಸಿಖ್‌ ವಿರೋಧಿ ನೇತೃತ್ವದ ಪಕ್ಷವೊಂದು ದೆಹಲಿ ಮುನ್ನಡೆಸುತ್ತಿರುವುದು ದುರದೃಷ್ಟಕರ.

ಮುಖ್ಯಮಂತ್ರಿ ಕಚೇರಿಯಿಂದ ಬಾಬಾ ಸಾಹೇಬ್‌ ಅಂಬೇಡ್ಕರ್‌, ಭಗತ್‌ ಸಿಂಗ್‌ ಅವರ ಭಾವಚಿತ್ರಗಳನ್ನು ತೆಗೆದುಹಾಕಲಾಗಿದೆ' ಎಂದು ಆರೋಪಿಸಿದರು.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ದೆಹಲಿ ಬಿಜೆಪಿ ಘಟಕ, 'ಮುಖ್ಯಮಂತ್ರಿ ಕಚೇರಿಯಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌, ಭಗತ್‌ಸಿಂಗ್‌, ಮಹಾತ್ಮಗಾಂಧಿ, ರಾಷ್ಟ್ರಪತಿ, ಪ್ರಧಾನಿ ಭಾವಚಿತ್ರ ಅಳವಡಿಸಲಾಗಿದೆ' ಎಂದು ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಚಿತ್ರ ಬಿಡುಗಡೆಗೊಳಿಸಿದೆ.

ಕೇಜ್ರಿವಾಲ್‌ ಕಿಡಿ:

'ಭಾವಚಿತ್ರ ತೆಗೆಯುವ ಮೂಲಕ ಅಂಬೇಡ್ಕರ್‌ ಅವರ ಲಕ್ಷಾಂತರ ಅನುಯಾಯಿಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗಿದೆ' ಎಂದು ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

'ಬಿಜೆಪಿ ಸರ್ಕಾರವು ಅಂಬೇಡ್ಕರ್‌ ಭಾವಚಿತ್ರ ತೆಗೆದು, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹಾಕಿದೆ. ನೀವು ಪ‍್ರಧಾನಿ ಚಿತ್ರವನ್ನೂ ಹಾಕಿ, ಆದರೆ ಬಾಬಾ ಸಾಹೇಬರ ಭಾವಚಿತ್ರ ತೆಗೆಯದೇ, ಮೊದಲಿನ ಹಾಗೆ ಮುಂದುವರಿಸಿ' ಎಂದು ಅವರು ಮನವಿ ಮಾಡಿದರು.

ಮುಖ್ಯಮಂತ್ರಿ ಕಚೇರಿ ಸೇರಿದಂತೆ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಅಂಬೇಡ್ಕರ್, ಭಗತ್‌ಸಿಂಗ್‌ ಅವರ ಭಾವಚಿತ್ರ ಮಾತ್ರ ಅಳವಡಿಸಬೇಕು ಎಂದು 2022ರ ಗಣರಾಜ್ಯೋತ್ಸವದ ದಿನ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಆದೇಶ ಹೊರಡಿಸಿದ್ದರು.

ತಿರುಗೇಟು:

'ಮೂರು ವರ್ಷಗಳ ಕಾಲ ಸಿಎಜಿ ವರದಿಯನ್ನು ಆಮ್‌ಆದ್ಮಿ ಸರ್ಕಾರವು ಹಿಸುಕಿಹಾಕಿತ್ತು. ವಿಧಾನಸಭೆಯಲ್ಲಿ ಮಂಗಳವಾರ ಸಿಎಜಿ ವರದಿ ಮಂಡನೆಯಾಗಲಿದೆ. ಈ ವಿಚಾರವನ್ನು ಮರೆಮಾಚಲು ಆಮ್‌ಆದ್ಮಿ ಪಕ್ಷವು ಭಾವಚಿತ್ರ ತೆರವು ವಿವಾದ ಸೃಷ್ಟಿಸಿ, ನಾಟಕ ಮಾಡುತ್ತಿದೆ. ಅಂಬೇಡ್ಕರ್ ಅವರಿಗೆ ಬಿಜೆಪಿ ಗೌರವ ನೀಡುವಷ್ಟು ಯಾರೂ ಗೌರವ ನೀಡುತ್ತಿಲ್ಲ' ಎಂದು ದೆಹಲಿ ಸಚಿವ ಮಜಿಂದರ್‌ ಸಿಂಗ್‌ ಸಿರ್ಸಾ ತಿಳಿಸಿದರು.

'ಭ್ರಷ್ಟಾಚಾರ ಪ್ರಕರಣದಲ್ಲಿ ಆಮ್‌ಆದ್ಮಿ ಪಕ್ಷದ ಹಲವು ನಾಯಕರು ಜೈಲಿನಲ್ಲಿದ್ದಾರೆ.‌ ಸಿಎಜಿ ವರದಿ ಹೊರಬಂದರೆ ಮತ್ತಷ್ಟು ನಾಯಕರು ಜೈಲು ಪಾಲಾಗಲಿದ್ದಾರೆ. ಹೀಗಾಗಿಯೇ ಈ ವಿವಾದ ಸೃಷ್ಟಿಸಿದ್ದಾರೆ' ಎಂದು ಸಚಿವ ರವೀಂದರ್‌ ಇಂದ್ರಾಜ್‌ ಆರೋಪಿಸಿದರು.

'ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ವಾಸವಿದ್ದ ವಿವಾದಾತ್ಮಕ 'ಶೀಷಮಹಲ್‌' ಬಂಗಲೆಗೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ದು ತೋರಿಸಲಾಗುವುದು' ಎಂದು ಸಚಿವ ಪರ್ವೇಶ್‌ ವರ್ಮಾ ಹೇಳಿದ್ದಾರೆ.

ದೆಹಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕಿ ಆತಿಶಿ ನೇತೃತ್ವದಲ್ಲಿ ವಿರೋಧ ಪಕ್ಷದ ಶಾಸಕರು ಸೋಮವಾರ ಸದನದಲ್ಲಿಯೇ ಪ್ರತಿಭಟನೆ ನಡೆಸಿದರು-ಪಿಟಿಐ ಚಿತ್ರ ದೆಹಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಭಗತ್‌ಸಿಂಗ್‌ ಮಹಾತ್ಮಗಾಂಧಿ ರಾಷ್ಟ್ರಪತಿ ಪ್ರಧಾನಿ ಭಾವಚಿತ್ರ ಅಳವಡಿಸಿರುವುದನ್ನು ದೆಹಲಿ ಬಿಜೆಪಿ ಘಟಕವು 'ಎಕ್ಸ್‌'ನಲ್ಲಿ ಬಿಡುಗಡೆಗೊಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries