ಕುರುಕ್ಷೇತ್ರ: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ 116 ಭಾರತೀಯರನ್ನು ಹೊತ್ತ ಅಮೆರಿಕದ ವಿಮಾನವು ಶನಿವಾರ ತಡರಾತ್ರಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಹೀಗೆ ಬಂದವರ ಪೈಕಿ ವ್ಯಕ್ತಿಯೊಬ್ಬನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2022ರ ಮೇ 14ರಂದು ದಾಖಲಾಗಿದ್ದ ಕ್ರಿಮಿನಲ್ ಬೆದರಿಕೆ ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪೆಹೋವಾದ ಸಾಹಿಲ್ ವರ್ಮಾ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಕುರುಕ್ಷೇತ್ರದ ಪೊಲೀಸ್ ವರಿಷ್ಠಾಧಿಕಾರಿ ವರುಣ್ ಸಿಂಗಲಾ ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಅಮೃತಸರ ವಿಮಾನ ನಿಲ್ದಾಣದಲ್ಲಿ ಸಾಹಿಲ್ ವರ್ಮಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರುಣ್ ಹೇಳಿದ್ದಾರೆ.
ಅಮೆರಿಕದಿಂದ ಭಾರತಕ್ಕೆ ವಾಪಸ್ ಆದವರಲ್ಲಿ ಕುರುಕ್ಷೇತ್ರ ಜಿಲ್ಲೆಯ ಮೂವರು ಸೇರಿದಂತೆ ಹರಿಯಾಣದ 33 ಮಂದಿ ಇದ್ದಾರೆ. ಉಳಿದಂತೆ ಪಂಜಾಬ್‌ನ 65, ಗುಜರಾತ್‌ನ 8, ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಿಂದ ತಲಾ ಒಬ್ಬರು ಇದ್ದಾರೆ. ಅಮೆರಿಕವು ವಾಪಸ್ ಕಳುಹಿಸಿದವರಲ್ಲಿ ಹೆಚ್ಚಿನವರು 18ರಿಂದ 30 ವಯೋಮಾನದವರು ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿವಿಧ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರದ ಭಾಗವಾಗಿ ಈ ಪ್ರಕ್ರಿಯೆ ನಡೆದಿದೆ.
ಅಮೆರಿಕವು ಇನ್ನಷ್ಟು ಅಕ್ರಮ ವಲಸಿಗರನ್ನು ಮತ್ತೊಂದು ವಿಮಾನದ ಮೂಲಕ ಇದೇ 16ರಂದು (ಭಾನುವಾರ) ಭಾರತಕ್ಕೆ ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ. ಕಳೆದ ವಾರ 104 ಅಕ್ರಮ ವಲಸಿಗರಿದ್ದ ಅಮೆರಿಕದ ಸೇನಾ ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು.