ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ರಾಜಕೀಯ ಸ್ಥಿರತೆಗಾಗಿ ಪ್ರಗತಿಪರ ಸುಧಾರಣೆಗಳಿಗೆ ಅಡ್ಡಿಯುಂಟುಮಾಡುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶುಕ್ರವಾರ ಟೀಕಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯ ಕುರಿತು ನಡೆಯುತ್ತಿರುವ ತಿಕ್ಕಾಟದ ಭಾಗವಾಗಿ ಧರ್ಮೇಂದ್ರ ಪ್ರಧಾನ್ ಅವರು ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸ್ಟಾಲಿನ್ ಅವರಿಗೆ ಪತ್ರ ಬರೆದಿರುವ ಧರ್ಮೇಂದ್ರ ಪ್ರಧಾನ್, 'ಮುಖ್ಯಮಂತ್ರಿಯಾಗಿರುವ ನೀವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ನಿಲ್ಲಬೇಕು ಮತ್ತು ಎನ್‌ಇಪಿಯಿಂದ ಪ್ರಯೋಜನ ಪಡೆದುಕೊಳ್ಳಲಿರುವ ಯುವಜನತೆಯ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡಬೇಕು' ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಟಾಲಿನ್ ಅವರು ಗುರುವಾರ ಬರೆದಿದ್ದ ಪತ್ರಕ್ಕೆ ಪ್ರತಿಯಾಗಿ ಪ್ರಧಾನ್ ಅವರು ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಪ್ರಾಯೋಜಿತ ಉಪಕ್ರಮಗಳಾದ ಸಮಗ್ರ ಶಿಕ್ಷಣ ಅಭಿಯಾನ ಮತ್ತು ಪಿ.ಎಂ ಶ್ರೀ ಶಾಲೆಗಳನ್ನು ಎನ್‌ಇಪಿಯೊಂದಿಗೆ ಜೋಡಿಸುವುದು ಮೂಲಭೂತವಾಗಿ ಸ್ವೀಕಾರಾರ್ಹವಲ್ಲ ಎಂದು ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿದ್ದರು.
'ಸ್ಟಾಲಿನ್ ಬರೆದಿರುವ ಪತ್ರವು, ಮೋದಿ ಸರ್ಕಾರವು ಉತ್ತೇಜಿಸುತ್ತಿರುವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಎನ್‌ಇಪಿಯನ್ನು ಒಂದೇ ದೃಷ್ಟಿಕೋನದಿಂದ ನೋಡುವುದು ಮತ್ತು ತಮ್ಮ ರಾಜಕೀಯ ಹಿತಾಸಕ್ತಿಯ ರಕ್ಷಣೆಗಾಗಿ ಬಳಸಿಕೊಳ್ಳುವುದು ಸೂಕ್ತವಲ್ಲ' ಎಂದು ಧರ್ಮೇಂದ್ರ ಪ್ರಧಾನ್ ಪತ್ರದಲ್ಲಿ ತಿಳಿಸಿದ್ದಾರೆ.
ತ್ರಿಭಾಷಾ ಸೂತ್ರಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಧರ್ಮೇಂದ್ರ ಪ್ರಧಾನ್, 'ಈ ನೀತಿಯು ಯಾವುದೇ ಭಾಷೆಯ ಹೇರಿಕೆಯನ್ನು ಪ್ರತಿಪಾದಿಸುವುದಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.