ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಇತ್ತೀಚೆಗೆ ಅಗಲ್ಪಾಡಿ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರಕ್ಕೆ ಚಿತ್ತೈಸಿದ ಸಂದರ್ಭ ನೂತನವಾಗಿ ನಿರ್ಮಿಸುವ ಮುಖಮಂಟಪದ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಸುವರ್ಣ ಮಂತ್ರಾಕ್ಷತೆ ರೂಪದಲ್ಲಿ ರೂ. ಐವತ್ತು ಸಾವಿರವನ್ನು ಅನುಗ್ರಹಿಸಿದ್ದರು. ಶ್ರೀಮಠದ ಪ್ರತಿನಿಧಿಗಳು ಭಾನುವಾರ ಸಂಜೆ ಶ್ರೀಮಂದಿರಕ್ಕೆ ಭೇಟಿಯಿತ್ತು ಧನಸಹಾಯ ಹಸ್ತಾಂತರದ ವಿಚಾರವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀರಾಮಚಂದ್ರಾಪುರ ಮಠ ಯತಿಗಳ ಆಗಮನದಿಂದ ನಾವೆಲ್ಲ ಪುಳಕಿತರಾಗಿದ್ದೇವೆ. ಶ್ರೀಗಳು ನೀಡಿದ ಅನುಗ್ರಹ, ಪ್ರಸಾದದಿಂದ ನೆನೆದ ಕಾರ್ಯವು ಬೇಗನೆ ಕೈಗೂಡಲಿದೆ ಎಂಬ ಭರವಸೆ ನಮ್ಮಲ್ಲಿ ಉಂಟಾಗಿದೆ ಎಂದರು.
ಶ್ರೀರಾಮಚಂದ್ರಾಪುರ ಮಠದ ಮಂಗಳೂರು ಪ್ರಾಂತ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಮಹಾಮಂಡಲ ಮಾತೃತ್ವಂ ಪ್ರಧಾನರಾದ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಸುರೇಶ್ ಕೆರೆಮೂಲೆ, ಪ್ರಮುಖರಾದ ಕುಸುಮ ಪೆರ್ಮುಖ, ಶ್ಯಾಮ ಭಟ್ ಬೇರ್ಕಡವು, ವೆಂಕಟ್ರಮಣ ಭಟ್ ಉಪ್ಪಂಗಳ, ಉದಯಕುಮಾರ್ ಕೋಳಿಕ್ಕಜೆ, ಪರಮೇಶ್ವರ ಭಟ್ ಪೆರುಮುಂಡ, ನಾರಾಯಣ ಮೂರ್ತಿ ಗುಣಾಜೆ, ಶ್ರೀಮಂದಿರದ ಗೌರವಾಧ್ಯಕ್ಷ ಬಾಬುಮಣಿಯಾಣಿ ಜಯನಗರ, ಅಗಲ್ಪಾಡಿ ಯಾದವ ಸಭಾ ಅಧ್ಯಕ್ಷ ಸುಧಾಮ ಪದ್ಮಾರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ಯುವವಿಭಾಗದ ಪ್ರಧಾನ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಶ್ರೀಮಂದಿರದಿಂದ ಶ್ರೀದೇವರ ಪ್ರಸಾದವನ್ನು ಪದಾಧಿಕಾರಿಗಳಿಗೆ ನೀಡಲಾಯಿತು.