ಕಾಸರಗೋಡು: ಕಣ್ಣೂರು-ಕಾಸರಗೋಡು ಸೇರಿದಂತೆ ಮಲಬಾರ್ ಪ್ರದೇಶ ಸೇರಿದಂತೆ ಕೇರಳದ ನಾನಾ ಜಿಲ್ಲೆಗಳಲ್ಲಿ ಅತಿಯಾದ ವನ್ಯಜೀವಿಗಳ ಉಪಟಳದಿಂದ ಕೃಷಿ ನಾಶದ ಜತೆಗೆ ಜನರ ಜೀವಕ್ಕೆ ಅಪಾಯ ಎದುರಾಗುತ್ತಿರುವ ಬಗ್ಗೆ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.
ಕಳೆದ ಹಲವು ಸಮಯದಿಂದ ಕಾಡುಹಂದಿ, ಕೋತಿ, ಚಿರತೆ, ನವಿಲು ಮುಂತಾದ ಕಾಡುಪ್ರಾಣಿಗಳ ಉಪಟಳದಿಂದ ಕಾಸರಗೋಡಿನ ರೈತ ಸಮುದಾಯ ಗಂಭೀರ ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮೀಣ ಭಾಗದ ರೈತರು ಬೆಳೆ ನಾಶವಾಗಿ ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಚಿರತೆಗಳು ಹೆಚ್ಚಾಗಿ ಗ್ರಾಮಗಳಿಗೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದು, ನಾಗರಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸುತ್ತಿರುವ ಬಗ್ಗೆ ರಾಜ್‍ಮೋಹನ್ ಉಣ್ಣಿತ್ತಾನ್ ಸಂಸತ್ತಿಗೆ ಮನವರಿಕೆ ಮಾಡಿದರು. ಕಾಸರಗೋಡು ಕ್ಷೇತ್ರದಲ್ಲಿ ಮಾನವ ಮತ್ತು ವನ್ಯಜೀವಿಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಸೂಕ್ತ ಮತ್ತು ಅತ್ಯಂತ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದರು ಸಂಸತ್ತಿನಲ್ಲಿ ಬಲವಾಗಿ ಆಗ್ರಹಿಸಿದರು.
(ಸಂಸದರ ಮಾತಿನ ವೀಡಿಯೊ)