ಕೊಯಮತ್ತೂರು: 2026ರಲ್ಲಿ ಲೋಕಸಭಾ ಕ್ಷೇತ್ರ ವಿಂಗಡಣೆ ನಂತರ ತಮಿಳುನಾಡು ಲೋಕಸಭಾ ಕ್ಷೇತ್ರಗಳ ಸಂಖ್ಯೆ 39 ರಿಂದ 31ಕ್ಕೆ ಇಳಿಕೆಯಾಗಲಿದೆ ಎಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಸ್ಟಾಲಿನ್ ಅವರ ಹೇಳಿಕೆಯನ್ನು ತಳ್ಳಿಹಾಕಿದ ಅಮಿತ್ ಶಾ, ನರೇಂದ್ರ ಮೋದಿ ಸರ್ಕಾರ 2014-24ರ ಅವಧಿಯಲ್ಲಿ ರಾಜ್ಯಕ್ಕೆ 5,08,337 ಕೋಟಿ ರೂ. ನೀಡಿದೆ ಎಂದು ಹೇಳಿದರು.
ಅಲ್ಲದೆ, ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯ ಕುರಿತು ಸ್ಟಾಲಿನ್ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಆರೋಪಿಸಿದರು.
ಈ ವಿಷಯದ ಬಗ್ಗೆ ಊಹಾಪೋಹಗಳಿಗೆ ಅಂತ್ಯ ಹಾಡಲು ಯತ್ನಿಸುತ್ತಾ, ತಮಿಳುನಾಡು ಸೇರಿದಂತೆ ಯಾವುದೇ ದಕ್ಷಿಣ ರಾಜ್ಯವು ಕ್ಷೇತ್ರ ವಿಂಗಡಣೆ ಮಾಡಿದಾಗ ಸಂಸತ್ತಿನಲ್ಲಿ ಸಂಸದರ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಅಮಿತ್ ಶಾ ಪ್ರತಿಪಾದಿಸಿದರು.
ಇಂದು ಕೊಯಮತ್ತೂರಿನಲ್ಲಿ ಬಿಜೆಪಿ ಕಚೇರಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅಮಿತ್ ಶಾ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ 'ವೈಫಲ್ಯ'ದ ಬಗ್ಗೆ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಟೀಕಿಸಿದರು. "ತಮಿಳುನಾಡಿನಲ್ಲಿ ರಾಷ್ಟ್ರವಿರೋಧಿ ಪ್ರವೃತ್ತಿ ಸರ್ವಕಾಲಿಕವಾಗಿದೆ" ಎಂದರು.
ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮಾದಕ ದ್ರವ್ಯಗಳ ಮಾರಾಟಕ್ಕೆ ಮುಕ್ತ ಅವಕಾಶ ನೀಡಲಾಗಿದೆ ಮತ್ತು ಅಕ್ರಮ ಗಣಿಗಾರಿಕೆ ಮಾಫಿಯಾ ಇಲ್ಲಿ ರಾಜಕೀಯವನ್ನು ಭ್ರಷ್ಟಗೊಳಿಸುತ್ತಿದೆ ಎಂದು ಆರೋಪಿಸಿದರು.
"ಡಿಎಂಕೆಯ ಎಲ್ಲಾ ನಾಯಕರು ಭ್ರಷ್ಟಾಚಾರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ" ಎಂದು ರಾಜ್ಯ ಸರ್ಕಾರ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದರು.