ಗುವಾಹಟಿ: ಅಸ್ಸಾಂನ ಮಧ್ಯಭಾಗದಲ್ಲಿ ಗುರುವಾರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ ಪ್ರಮಾಣ 5ರಷ್ಟು ದಾಖಲಾಗಿದೆ. ಆದರೆ, 'ಇದುವರೆಗೂ ಗಾಯಗೊಂಡ, ಆಸ್ತಿಪಾಸ್ತಿ ಹಾನಿಯಾದ ಕುರಿತು ಯಾವುದೇ ವರದಿಯಾಗಿಲ್ಲ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ವರದಿ ಪ್ರಕಾರ, 'ಮೋರಿಗಾಂವ್ ಜಿಲ್ಲೆಯ ಬ್ರಹ್ಮಪುತ್ರ ನದಿಯ ದಕ್ಷಿಣ ಭಾಗದ 16 ಕಿ.ಮೀ ತಳಭಾಗದಲ್ಲಿ ಬೆಳಿಗ್ಗೆ 2.25ರ ವೇಳೆಗೆ ಭೂಕಂಪ ಸಂಭವಿಸಿದೆ.
ಗುವಾಹಟಿಯಿಂದ ಪೂರ್ವಭಾಗದಲ್ಲಿರುವ 52 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ' ಎಂದು ತಿಳಿಸಿದೆ.
ರಾಜ್ಯದ ಕಾಮರೂಪ್, ನಾಗಾಂವ್, ಪೂರ್ವ ಹಾಗೂ ಪಶ್ಚಿಮ ಕರ್ಬಿ, ಗೊಲಾಘಾಟ್, ಜೋರ್ಹಾಟ್, ಶಿವಸಾಗರ್, ಕಛಾರ್, ಕರೀಂಗಂಜ್, ಧುಬ್ರಿ, ದಕ್ಷಿಣ ಸಲ್ಮಾರಾ- ಮಂಕಾಚಾರ್, ಗೋಲಾಪಾರ ಜಿಲ್ಲೆಗಳಲ್ಲಿ ಕಂಪನದ ಅನುಭವ ಉಂಟಾಗಿದೆ.
ಇದಲ್ಲದೇ, ಅರುಣಾಚಲಪ್ರದೇಶ ದಕ್ಷಿಣ- ಪಶ್ಚಿಮ ಭಾಗ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಹಾಗೂ ಪಶ್ಚಿಮ ಬಂಗಾಳದ ವಿವಿಧೆಡೆಗಳಲ್ಲಿ ಕಂಪನದ ಅನುಭವ ಉಂಟಾಗಿದೆ.
ಇದಲ್ಲದೇ, ಭೂತಾನ್‌ನ ಮಧ್ಯ, ಪೂರ್ವಭಾಗ, ಬಾಂಗ್ಲಾದೇಶದ ಕೆಲವೆಡೆಗಳಲ್ಲಿಯೂ ಕಂಪಿಸಿದೆ ಎಂದು ಭೂಕಂಪ ಅಧ್ಯಯನ ಕೇಂದ್ರ ತಿಳಿಸಿದೆ.