ರಾಯಪುರ (PTI): ಛತ್ತೀಸಗಢದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದ ಬಿಜೆಪಿ, ನಗರಸಭೆ ಚುನಾವಣೆಯಲ್ಲಿಯೂ ಬಹುತೇಕ ಸೀಟುಗಳನ್ನು ಗೆದ್ದು ಪಾರುಪತ್ಯ ಮೆರೆದಿದೆ.
ವಿಷ್ಣು ದೇವ್ ಸಾಯಿ ಅವರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಮತ್ತು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ವಾಗ್ದಾನಗಳ ಈಡೇರಿಕೆಯನ್ನೇ ಆಧಾರವಾಗಿ ಇಟ್ಟುಕೊಂಡು ಪ್ರಚಾರ ನಡೆಸಿದ್ದ ಪಕ್ಷವು, ಎಲ್ಲ 10 ಮೇಯರ್ ಸ್ಥಾನಗಳನ್ನು ಗೆದ್ದಿದೆ.
10 ಮುನ್ಸಿಪಲ್ ಕಾರ್ಪೊರೇಷನ್, 49 ಮುನ್ಸಿಪಲ್ ಕೌನ್ಸಿಲ್ ಮತ್ತು 114 ನಗರ ಪಂಚಾಯಿತಿ ಸೇರಿದಂತೆ 173 ನಗರ ಸ್ಥಳೀಯ ಸಂಸ್ಥೆಗಳಿಗೆ ಫೆ.11ರಂದು ಚುನಾವಣೆ ನಡೆದಿತ್ತು.
ಶನಿವಾರ ಮತ ಎಣಿಕೆ ನಡೆದಿದ್ದು ಸದ್ಯದ ಫಲಿತಾಂಶದ ಪ್ರಕಾರ, ಮುನ್ಸಿಪಲ್ ಕೌನ್ಸಿಲ್‌ಗಳ 35 ಅಧ್ಯಕ್ಷ ಸ್ಥಾನಗಳು ಮತ್ತು 81 ನಗರ ಪಂಚಾಯಿತಿಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಪಕ್ಷವು ಮುನ್ಸಿಪಲ್ ಕೌನ್ಸಿಲ್‌ಗಳ 8 ಅಧ್ಯಕ್ಷ ಸ್ಥಾನಗಳನ್ನು ಮತ್ತು 22 ನಗರ ಪಂಚಾಯಿತಿಗಳಲ್ಲಿ ಗೆದ್ದಿದೆ. ಎಎಪಿ ಮುನ್ಸಿಪಲ್ ಕೌನ್ಸಿಲ್‌ನ ಒಂದು ಅಧ್ಯಕ್ಷ ಸ್ಥಾನ ಮತ್ತು ಬಿಎಸ್‌ಪಿ ಪಕ್ಷವು ಒಂದು ನಗರ ಪಂಚಾಯಿತಿಯ ಗೆದ್ದಿದೆ.
ಪಕ್ಷೇತರರು 10 ನಗರ ಪಂಚಾಯಿತಿ ಮತ್ತು ಮುನ್ಸಿಪಲ್ ಕೌನ್ಸಿಲ್‌ನ ಐದು ಅಧ್ಯಕ್ಷ ಸ್ಥಾನಗಳನ್ನು ಗೆದ್ದಿದ್ದಾರೆ.