ಲಂಡನ್: ವೈಟ್‌ಚಾಪೆಲ್ ರೈಲು ನಿಲ್ದಾಣದಲ್ಲಿ ಬಂಗಾಳಿ ಭಾಷೆಯ ನಾಮಫಲಕ ಅಳವಡಿಸಿರುವುದಕ್ಕೆ ಬ್ರಿಟನ್ ಸಂಸದರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉದ್ಯಮಿ ಇಲಾನ್ ಮಸ್ಕ್ ಬೆಂಬಲ ಸೂಚಿಸಿದ್ದಾರೆ.
ಬಂಗಾಳಿ ಭಾಷೆಯ ನಾಮಫಲಕ ಇರುವ ಫೋಟೊವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಗ್ರೇಟ್ ಯರ್ಮೌತ್ ಸಂಸದ ರೂಪರ್ಟ್ ಲೋವ್ ಅವರು, 'ಇದು ಲಂಡನ್...
ನಿಲ್ದಾಣದ ಹೆಸರು ಇಂಗ್ಲಿಷ್‌ನಲ್ಲೇ ಇರಬೇಕು ಮತ್ತು ಇಂಗ್ಲಿಷ್ ಮಾತ್ರವೇ ಇರಬೇಕು' ಎಂದು ಹೇಳಿದ್ದಾರೆ.
ರೂಪರ್ಟ್ ಲೋವ್ ಮಾಡಿರುವ ಪೋಸ್ಟ್ ಬಗ್ಗೆ 'ಎಕ್ಸ್' ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜತೆಗೆ, 'ಎಕ್ಸ್' (ಟ್ವಿಟರ್) ಮಾಲೀಕ ಇಲಾನ್ ಮಸ್ಕ್ ಕೂಡ 'ಹೌದು' ಎಂದು ಕಾಮೆಂಟ್ ಮಾಡಿದ್ದಾರೆ.
ಪೂರ್ವ ಲಂಡನ್‌ಗೆ ಬಾಂಗ್ಲಾದೇಶ ಸಮುದಾಯದ ಕೊಡುಗೆಯನ್ನು ಗೌರವ ಸಲ್ಲಿಸಲು 2022ರಲ್ಲಿ ವೈಟ್‌ಚಾಪಲ್ ನಿಲ್ದಾಣದಲ್ಲಿ ಬಂಗಾಳಿ ಭಾಷೆಯ ನಾಮಫಲಕವನ್ನು ಅಳವಡಿಸಲಾಗಿತ್ತು. ಇದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
'ಲಂಡನ್‌ನ ವೈಟ್‌ಚಾಪಲ್ ರೈಲು ನಿಲ್ದಾಣದಲ್ಲಿ ಬಂಗಾಳಿ ಭಾಷೆಯ ನಾಮಫಲಕ ಬಳಸಲಾಗಿದೆ ಎಂದು ಹೇಳಲು ಹೆಮ್ಮೆಪಡುತ್ತೇನೆ. ಇದು 1,000 ವರ್ಷಗಳಷ್ಟು ಹಳೆಯದಾದ ಬಂಗಾಳಿ ಭಾಷೆಯ ಜಾಗತಿಕ ಪ್ರಾಮುಖ್ಯತೆ ಮತ್ತು ಬಲವನ್ನು ಸೂಚಿಸುತ್ತದೆ' ಎಂದು 'ಎಕ್ಸ್'ನಲ್ಲಿ ಮಮತಾ ಪೋಸ್ಟ್ ಮಾಡಿದ್ದರು.