ಚಂಡೀಗಢ: ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಮತ್ತೊಂದು ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ಶನಿವಾರ ನಡೆಸಲಿದೆ.
ಮುಂದಿನ ಸಭೆಯನ್ನು ದೆಹಲಿಯಲ್ಲಿ ನಡೆಸುವಂತೆ ರೈತರು ಕಳೆದ ಸಭೆಯಲ್ಲಿ ಸರ್ಕಾರವನ್ನು ಕೋರಿದ್ದರು.
ಆದರೆ ಕೇಂದ್ರ ಸರ್ಕಾರ ಸಭೆಯನ್ನು ಚಂಡೀಗಢದಲ್ಲಿ ನಿಗದಿ ಮಾಡಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಪೂರ್ಣ ಚಂದ್ರ ಕೃಷ್ಣ ಅವರು ರೈತ ನಾಯಕರಾದ ಜಗಜಿತ್ ಸಿಂಗ್ ಡಲ್ಲೇವಾಲ್ ಮತ್ತು ಸರವಣ ಸಿಂಗ್ ಪಂಡೇರ್ ಅವರಿಗೆ ಪತ್ರ ಮುಖೇನ ಸಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಚಂಡೀಗಢದಲ್ಲಿ ಕಳೆದ 14ರಂದು ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಜತೆ ನಡೆದ ಸಭೆಯ ಮುಂದುವರಿದ ಭಾಗ ಇದೇ 22 ರಂದು (ಶನಿವಾರ) ನಡೆಯಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರದ ಸಚಿವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಫೆ.14ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವದ ಕೇಂದ್ರದ ತಂಡವು ರೈತ ಪ್ರತಿನಿಧಿಗಳ ಜತೆ ಸಭೆ ನಡೆಸಿತ್ತು.