ನವದೆಹಲಿ: 'ಭಾರತ ಹಾಗೂ ಚೀನಾ ನಡುವಿನ ಸಂಬಂಧ ಕುರಿತು ಸಾಗರೋತ್ತರ ಭಾರತೀಯ ಕಾಂಗ್ರೆಸ್‌ನ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ನೀಡಿರುವ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನದ್ದಲ್ಲ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಖಾಸಗಿ ಸುದ್ದಿಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಪಿತ್ರೋಡಾ, ಚೀನಾದ ಬಗ್ಗೆ ಭಾರತ ಹೊಂದಿರುವ ಮನಸ್ಥಿತಿ ಬದಲಾಗಬೇಕಿದೆ ಎಂದಿದ್ದರು.
'ಭಾರತಕ್ಕೆ ಚೀನಾದಿಂದ ಬೆದರಿಕೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಇದು ಅಮೆರಿಕವು ತನ್ನ ಶತ್ರು ರಾಷ್ಟ್ರಗಳನ್ನು ವ್ಯಾಖ್ಯಾನಿಸುವ ಪ್ರವೃತ್ತಿಯ ಒಂದು ಅನುಕರಣೆಯಾಗಿದೆ. ಒಗ್ಗಟ್ಟಾಗಿ ಎಲ್ಲಾ ರಾಷ್ಟ್ರಗಳು ಮುಂದುವರಿಯಬೇಕೇ ಹೊರತು ಕಾದಾಡಬಾರದು' ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜೈರಾಮ್, 'ದೇಶದ ವಿದೇಶಾಂಗ ನೀತಿ, ಭದ್ರತೆ ಮತ್ತು ಆರ್ಥಿಕ ವ್ಯವಸ್ಥೆಗೆ ಚೀನಾ ಸದಾ ಸವಾಲಾಗಿದೆ. 2020ರ ಜೂನ್ 19ರ ಘಟನೆಗೆ ಕ್ಲೀನ್ ಚಿಟ್ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಕಾಂಗ್ರೆಸ್ ಇಂದಿಗೂ ಪ್ರಶ್ನಿಸುತ್ತಿದೆ. 2025ರ ಜ. 28ರಂದು ಚೀನಾ ಕುರಿತು ಭಾರತ ನೀಡಿದ ಹೇಳಿಕೆ ತೀರಾ ಇತ್ತೀಚಿನದು' ಎಂದಿದ್ದಾರೆ.
'ಪರಿಸ್ಥಿತಿಯನ್ನು ಎದುರಿಸಲು ಹಾಗೂ ಸವಾಲುಗಳನ್ನು ಹಿಮ್ಮೆಟ್ಟಿಸಲು ಸಂಸತ್ತಿನಲ್ಲಿ ಚರ್ಚಿಸಿ, ಸಭೆ ನಡೆಸುವಂತೆ ಹಲವು ಬಾರಿ ಕೋರಲಾಗಿದೆ. ಆದರೆ ಅವೆಲ್ಲವನ್ನೂ ನಿರಾಕರಿಸಲಾಗಿದೆ. ಇದು ಅತ್ಯಂತ ವಿಷಾದನೀಯ' ಎಂದಿದ್ದಾರೆ.