ನವದೆಹಲಿ: ಜಗತ್ತಿನಲ್ಲೇ ಭಾರತ ಅತಿಹೆಚ್ಚು ನಿರುದ್ಯೋಗಿಗಳನ್ನು ಹೊಂದಿದೆ. ಯುವಜನರನ್ನು ಸಬಲೀಕರಣಗೊಳಿಸುವ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ಸಂಸದ ಶಶಿ ತರೂರ್ ತಿಳಿಸಿದರು.
'ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ'ದಲ್ಲಿ ಶುಕ್ರವಾರ 'ಪ್ರಕ್ಷುಬ್ಧದ ಪ್ರವರ್ಧಮಾನ: ರಾಷ್ಟ್ರಗಳು ಹೇಗೆ ಸವಾಲು ಎದುರಿಸಬಹುದು' ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಏನನ್ನು ಚಿಂತಿಸಬೇಕು? ಎಂಬುದರ ಬದಲಿಗೆ ಹೇಗೆ ಚಿಂತಿಸಬೇಕು? ಎಂಬುದನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಯುವಜನರನ್ನು ಕೌಶಲಪೂರ್ಣರನ್ನಾಗಿಸಿ, ಉದ್ಯೋಗ ಒದಗಿಸಬೇಕು ಎಂದು ಪ್ರತಿಪಾದಿಸಿದರು.
'ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನದ ಬಳಕೆಯಿಂದ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಭಾರಿ ಬದಲಾವಣೆಯಾಗಲಿದೆ. ವಿದ್ಯಾರ್ಥಿಗಳು ಮತ್ತು ಯುವಜನರನ್ನು ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಸಜ್ಜುಗೊಳಿಸುವ ಅಗತ್ಯವಿದೆ. ಪ್ರಸ್ತುತ ಜಾಗತಿಕ ಉದ್ಯೋಗ ವಲಯದಲ್ಲಿರುವ ಶೇಕಡ 30ರಷ್ಟು ಉದ್ಯೋಗಗಳು ಇನ್ನು ಐದು ವರ್ಷಗಳಲ್ಲಿ ಕಣ್ಮರೆಯಾಗಲಿವೆ' ಎಂದು ಹೇಳಿದರು.
ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಪಪಾಂಡ್ರ್ಯೂ ಮಾತನಾಡಿ, 'ಉತ್ತಮ, ಆದರ್ಶ ಪ್ರಜಾಪ್ರಭುತ್ವ ವ್ಯವಸ್ಥೆಯು ತನ್ನ ನಾಗರಿಕರ ಮೇಲೆ ವಿಶ್ವಾಸ ಇಡಬೇಕು. ಶಿಕ್ಷಣ ಮತ್ತು ಪ್ರಜಾತಂತ್ರ ಜತೆ ಜತೆಯಾಗಿ ಮುನ್ನಡೆಯಬೇಕು' ಎಂದು ಹೇಳಿದರು.
'ಉತ್ತಮ ಪ್ರಜಾತಂತ್ರ ವ್ಯವಸ್ಥೆಗೆ ಪಾರದರ್ಶಕ ಆಡಳಿತ ಮತ್ತು ಉತ್ತರದಾಯಿತ್ವ ಮುಖ್ಯ. ಇವುಗಳ ಕೊರತೆಯಿಂದಾಗಿಯೇ ಗ್ರೀಸ್ ಆರ್ಥಿಕ ಸಂಕಷ್ಟ ಎದುರಿಸಬೇಕಾಯಿತು. ಗ್ರೀಸ್‌ನಲ್ಲಿ ಜನರ ಹಣ ಸಾರ್ವಜನಿಕ ಹಿತಾಸಕ್ತಿಗೆ ವಿನಿಯೋಗವಾಗಲಿಲ್ಲ. ರಾಜಕಾರಣಿಗಳ ಗಮನ ಅಧಿಕಾರ ಹಿಡಿಯುವುದರತ್ತಲೇ ಇತ್ತು' ಎಂದರು.
'ಇಂಕ್ ಟಾಕ್ಸ್' ಸಂಸ್ಥೆ ಸಿಇಒ ಲಕ್ಷ್ಮೀ ಪ್ರತೂರಿ ಗೋಷ್ಠಿ ನಿರ್ವಹಿಸಿದರು.
ವಿಶ್ವಸಂಸ್ಥೆಯಲ್ಲೂ ಅಸಮಾನತೆ
ನಾವು ಬದುಕುತ್ತಿರುವ ಜಗತ್ತಿನ ಕನ್ನಡಿಯಾಗಿ ವಿಶ್ವಸಂಸ್ಥೆ ಇದೆ. ವಿಶ್ವಸಂಸ್ಥೆ ಕೂಡಾ ಮೂಲ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ. ಅಸಮಾನತೆ ತಾರತಮ್ಯಗಳು ಅಲ್ಲೂ ಇವೆ. ಅದನ್ನು ಅರ್ಥ ಮಾಡಿಕೊಂಡರಷ್ಟೇ ಪರ್ಯಾಯ ಜಾಗತಿಕ ವ್ಯವಸ್ಥೆಯ ಬಗ್ಗೆ ಚಿಂತಿಸಬಹುದು ಎಂದು ಸಂಸದ ಶಶಿ ತರೂರ್ ತಿಳಿಸಿದರು. ಕೋವಿಡ್ ನಂತರದ ಜಾಗತಿಕ ನಾಯಕರು ಗಡಿಯಾಚಿನ ವಿಶ್ವದಲ್ಲಿ ಪ್ರಬಲರಾಗುವ ಬದಲಿಗೆ ತಮ್ಮ ಗಡಿರೇಖೆಯೊಳಗೆ ಅಂದರೆ ಆಂತರಿಕವಾಗಿ ಬಲಿಷ್ಠರಾಗಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.