ತಿರುವನಂತಪುರ: ಕೇರಳದಲ್ಲಿ ಹಗಲಿನ ವೇಳೆ ತಾಪಮಾನ ಏರಿಕೆಯಾಗುತ್ತಿರುವ ಕಾರಣ ಕಾರ್ಮಿಕರ ಕೆಲಸ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.
ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ದುಡಿಯುವ ಎಲ್ಲಾ ಕಾರ್ಮಿಕರು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಕಡ್ಡಾಯವಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಲೇಬರ್ ಕಮಿಷನರ್ ಸಫ್ನಾ ನಾಸಿರುದ್ದೀನ್ ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಳಿಯಲ್ಲಿ ಕೆಲಸ ಮಾಡುವವರಿಗೆ ಬೆಳಿಗ್ಗೆ ಆರಂಭವಾದ ಕೆಲಸ 12 ಗಂಟೆಗೆ ಕೊನೆಗೊಳ್ಳಬೇಕು. ಮಧ್ಯಾಹ್ನದ ಪಾಳಿ 3 ಗಂಟೆಗೆ ಆರಂಭವಾಗಬೇಕು. ಮುಖ್ಯವಾಗಿ ಕಟ್ಟಡ, ರಸ್ತೆ ನಿರ್ಮಾಣ ಕೆಲಸ ಮಾಡುವವರು ಈ ನಿಯಮ ಪಾಲಿಸಲೇಬೇಕು. ಕಾರ್ಮಿಕರ ಕೆಲಸದ ಅವಧಿಯ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಯೊಬ್ಬರನ್ನು ನೇಮಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸನ್‌ಸ್ಟ್ರೋಕ್‌ನಂತಹ ಅಪಾಯ ತಪ್ಪಿಸಲು ಮೇ 10ರವರೆಗೆ ಈ ನಿಯಮ ಜಾರಿಯಲ್ಲಿರಲಿದೆ. ಸಮುದ್ರ ಮಟ್ಟದಿಂದ 3 ಸಾವಿರ ಅಡಿ ಎತ್ತರದಲ್ಲಿ ವಾಸವಿರುವ ಬಿಸಿಲಿನ ಝಳದಿಂದ ಅಪಾಯ ಎದುರಾಗದಿರುವ ಪ್ರದೇಶದಲ್ಲಿರುವವರಿಗೆ ಈ ನಿಯಮ ಅನ್ವಯವಾಗದು ಎಂದು ಆದೇಶದಲ್ಲಿ ತಿಳಿಸಲಾಗಿದೆ.