ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಾರ್ಸೇಲ್ ನಗರದಲ್ಲಿರುವ ಐತಿಹಾಸಿಕ ಮಜರ್ಗೆಸ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಭಾರತೀಯ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು. ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರು ಈ ವೇಳೆ ಜತೆಯಲ್ಲಿದ್ದರು.
ಹುತಾತ್ಮರ ಸ್ಮಾರಕಕ್ಕೆ ಮೋದಿ ಅವರು ತ್ರಿವರ್ಣದಿಂದ ಕೂಡಿದ್ದ ಹೂಗುಚ್ಛ ಅರ್ಪಿಸಿದರು. ಈ ಯುದ್ಧ ಸ್ಮಾರಕ ಮತ್ತು ಸಮಾಧಿ ಸ್ಥಳವನ್ನು 'ಕಾಮನ್‌ವೆಲ್ತ್ ವಾರ್ ಗ್ರೇವ್ಸ್ ಕಮಿಷನ್' (ಸಿಡಬ್ಲ್ಯುಜಿಸಿ) ನಿರ್ವಹಿಸುತ್ತಿದೆ.
1914-18ರವೆರಗೆ ನಡೆದ ಮೊದಲ ವಿಶ್ವ ಸಮರದಲ್ಲಿ ಮಡಿದ 1,487 ಸೈನಿಕರನ್ನು ಹಾಗೂ 1939-45ರವರೆಗಿನ ಎರಡನೇ ವಿಶ್ವ ಸಮರದಲ್ಲಿ ಮಡಿದ 267 ಸೈನಿಕರನ್ನು ಇಲ್ಲಿ ಸಮಾಧಿ ಮಾಡಲಾಗಿದೆ. ಇದರಲ್ಲಿ ಒಟ್ಟು 205 ಭಾರತೀಯ ಸೈನಿಕರ ಸಮಾಧಿಗಳಿವೆ ಎಂದು ಸಿಡಬ್ಲ್ಯುಜಿಸಿ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಮಜರ್ಗೆಸ್‌ನಲ್ಲಿ ಭಾರತೀಯರ ಸ್ಮಾರಕವನ್ನು ಫೀಲ್ಡ್ ಮಾರ್ಷಲ್ ಸರ್ ವಿಲಿಯಂ ಬರ್ಡ್‌ವುಡ್ ಅವರು 1925ರ ಜುಲೈನಲ್ಲಿ ಅನಾವರಣಗೊಳಿಸಿದ್ದರು.
ಸಾರ್ವಕರ್ ಸ್ಮರಿಸಿದ ಮೋದಿ:
ಮಾರ್ಸೇಲ್ ನಗರಕ್ಕೆ ಮ್ಯಾಕ್ರನ್ ಜತೆಗೆ ಮಂಗಳವಾರವೇ ಬಂದಿಳಿದಿದ್ದ ಪ್ರಧಾನಿ ಮೋದಿ ಅವರು, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾರ್ವಕರ್ ಅವರನ್ನು ಸ್ಮರಿಸಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.
'ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ನಗರವೂ ವಿಶೇಷ ಪ್ರಾಮುಖ್ಯ ಪಡೆದಿದೆ. ವೀರ ಸಾರ್ವಕರ್ ಅವರು ಬ್ರಿಟಿಷರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಇಲ್ಲಿಯೇ' ಎಂದು ಅವರು ಪೋಸ್ಟ್‌ನಲ್ಲಿ ಸ್ಮರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರು ಮಾರ್ಸೇಲ್‌ನಲ್ಲಿ ಬುಧವಾರ ಭಾರತದ ಹೊಸ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಉದ್ಘಾಟಿಸಿದರು
'ಹೀಗೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಾವರ್ಕರ್ ಅವರನ್ನು ಬ್ರಿಟಿಷ್‌ರ ಕಸ್ಟಡಿಗೆ ಹಸ್ತಾಂತರಿಸಲಾಯಿತು. ಆ ವೇಳೆ ಮಾರ್ಸೇಲ್‌ನ ಜನರು ಮತ್ತು ಆಗಿನ ಫ್ರೆಂಚ್ ಕಾರ್ಯಕರ್ತರು ಸಾರ್ವಕರ್ ಅವರನ್ನು ಬ್ರಿಟಿಷರಿಗೆ ಒಪ್ಪಿಸಬಾರದು ಎಂದು ಆಗ್ರಹಿಸಿದ್ದರು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ' ಎಂದು ಪ್ರಧಾನಿ ಹೇಳಿದ್ದಾರೆ. 'ಸಾವರ್ಕರ್ ಅವರ ಶೌರ್ಯವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ' ಎಂದು ಅವರು ಉಲ್ಲೇಖಿಸಿದ್ದಾರೆ.
ಬ್ರಿಟಿಷ್ ವಸಾಹತು ಆಳ್ವಿಕೆಯಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಅವರನ್ನು ಬ್ರಿಟಿಷರು ಮೋರಿಯಾ ಎಂಬ ಹಡಗಿನಲ್ಲಿ ಭಾರತಕ್ಕೆ ಕರೆತರುತ್ತಿದ್ದಾಗ, 1910ರ ಜುಲೈ 8ರಂದು ಅವರು ಸೆರೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಹಡಗಿನಿಂದ ಹೊರ ಜಿಗಿದು, ಈಜಿಕೊಂಡು ದಡ ಸೇರಿದ್ದರು. ಫ್ರೆಂಚ್ ಅಧಿಕಾರಿಗಳು ಅವರನ್ನು ಹಿಡಿದು ಬ್ರಿಟಿಷ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಬಳಿಕ, ಸಾವರ್ಕರ್ ಅವರಿಗೆ ಜೀವಾವಧಿ ಶಿಕ್ಷ ವಿಧಿಸಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲರ್ ಜೈಲಿನಲ್ಲಿಡಲಾಯಿತು.
ಮಾರ್ಸೇಲ್‌ನಲ್ಲಿರುವ ಮಜರ್ಗೆಸ್ ಸಮಾಧಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಅವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ಎರಡು 'ಟಿ'ಗಳನ್ನು ಕುರಿತು ಪ್ರಶ್ನೆ ಎತ್ತಬೇಕು. ಒಂದು 'ಟಿ'- ಟ್ಯಾರಿಫ್ (ದರ) ಇನ್ನೊಂದು 'ಟಿ'-ಟ್ರಾಮ್ಯಾಟಿಕ್ ಡಿಪೋರ್ಷನ್ (ಆಘಾತಕಾರಿ ರೀತಿಯಲ್ಲಿ ಗಡೀಪಾರು ಮಾಡುವುದು)
ಭದ್ರತಾ ಮಂಡಳಿ: ಭಾರತಕ್ಕೆ ಬೆಂಬಲ ಪುನರುಚ್ಚರಿಸಿದ ಫ್ರಾನ್ಸ್
ಮಾರ್ಸೇಲ್/ಪ್ಯಾರಿಸ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಭಾರತಕ್ಕೆ ಕಾಯಂ ಸದಸ್ಯ ಸ್ಥಾನ ದೊರೆಯಬೇಕು ಎಂಬುದಕ್ಕೆ ಫ್ರಾನ್ಸ್‌ನ ದೃಢವಾದ ಬೆಂಬಲ ನೀಡುತ್ತದೆ ಎಂದು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್ ಪುನರುಚ್ಚರಿಸಿದರು.
ಪ್ರಧಾನಿ ಮೋದಿ ಮತ್ತು ಮ್ಯಾಕ್ರನ್ ಅವರ ನಡುವೆ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಯಿತು. ಈ ವೇಳೆ ಮ್ಯಾಕ್ರನ್ ಅವರು ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ವಿಚಾರದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದರು. ಭದ್ರತಾ ಮಂಡಳಿಯಲ್ಲಿ ತುರ್ತು ಸುಧಾರಣೆ ಅಗತ್ಯವಿದೆ ಎಂದು ಉಭಯ ನಾಯಕರು ಒತ್ತಿ ಹೇಳಿದರು. ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸುವ ಕುರಿತು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದರು.
'ಫ್ರಾನ್ಸ್ ಅಧ್ಯಕ್ಷರ ವಿಮಾನದಲ್ಲಿ ಉಭಯ ನಾಯಕರು ಪ್ಯಾರಿಸ್‌ನಿಂದ ಮಾರ್ಸೇಲ್‌ವರೆಗೂ ಪ್ರಯಾಣಿಸಿದರು. ಈ ವೇಳೆ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಯುರೋಪ್ ಪಶ್ಚಿಮ ಏಷ್ಯಾ ಮತ್ತು ಹಿಂದೂಮಹಾಸಾಗರ-ಪೆಸಿಫಿಕ್ ಪ್ರದೇಶಗಳಲ್ಲಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು. ಅಲ್ಲದೆ ಕೆಲ ಜಾಗತಿಕ ಮತ್ತು ಪ್ರಾದೇಶಿಕ ಮಹತ್ವದ ವಿಷಯಗಳ ಕುರಿತು ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು' ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯಕದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ. 'ಭಾರತ ಮತ್ತು ಫ್ರಾನ್ಸ್ ನಡುವಿನ ಸಂಬಂಧಗಳು ಹೊಸ ಎತ್ತರವನ್ನು ಮುಟ್ಟಿವೆ' ಎಂದು ಅವರು ಹೇಳಿದ್ದಾರೆ.