ಬದಿಯಡ್ಕ: ಮಧ್ವಾದೀಶ ವಿಠಲದಾಶ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರ ಮುಂದಾಳುತ್ವದಲ್ಲಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ನಟರಾಜ ವೇದಿಕೆಯ ಮುಂಭಾಗದಲ್ಲಿ ಜರಗಿದ ಶಿವನಾಮಾರ್ಚನೆ ಸಾಂಬಸದಾಶಿವ ಭಜನೆ ಕಾರ್ಯಕ್ರಮವನ್ನು ಉದ್ಯಮಿ ಕೊಡುಗೈ ದಾನಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸದಾಶಿವನನ್ನು ಸದಾ ನೆನೆಯುತ್ತಾ ನಮ್ಮ ದೈನಂದಿನ ಕಾರ್ಯಕ್ಕೆ ಮುಂದುವರಿಯಬೇಕು. ಸತ್ಕಾರ್ಯಗಳನ್ನು ಮಾಡುತ್ತಾ ವೈಯಕ್ತಿಕ ಸಾಧನೆಗಳನ್ನು ಶಿಸ್ತುಬದ್ಧವಾಗಿ ಮಾಡಬೇಕು. ಭಜನೆಗಳನ್ನು ಮನಸ್ಸನ್ನು ಶುದ್ಧೀಕರಿಸಿದರೆ ಕುಣಿತ ಭÀಜನೆಯು ದೇಹದ ಕಲ್ಮಶಗಳನ್ನು ದೂರಗೊಳಿಸುತ್ತದೆ. ಏತಡ್ಕವೆಂಬ ಕುಗ್ರಾಮದಲ್ಲಿ ಅದ್ಭುತ, ವಿಶಿಷ್ಟ ಯೋಚನೆಗಳ ಮೂಲಕ ಭಗವದ್ಭಕ್ತರನ್ನು ದೇವಸ್ಥಾನದೊಂದಿಗೆ ಜೋಡಿಸಿದ್ದಾರೆ. ಈ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡ ಎಲ್ಲರೂ ಪುಣ್ಯವಂತರು ಎಂದು ಅವರು ನುಡಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ`. ಶಾಮ ಭಟ್ ಬೆಂಗಳೂರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಕಡಿಮೆ ಸಮಯದಲ್ಲಿ ದೇವರ ಕಾರ್ಯವನ್ನು ಸುಸೂತ್ರವಾಗಿ ನಡೆಸಿಕೊಡುವಲ್ಲಿ ನಾಡಿನ ಜನರ ಪಾತ್ರವನ್ನು ಮರೆಯುವಂತಿಲ್ಲ. ಶಿವಾರ್ಪಣಂ ಕಾರ್ಯದ ಮೂಲಕ ಬ್ರಹ್ಮಕಲಶೋತ್ಸವದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಿದೆ ಎಂದರು.
ಭಜನಾ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ, ಮಾತೃಸಮಿತಿಯ ಅಧ್ಯಕ್ಷೆ ಉಷಾ ಶ್ಯಾಮ ಭಟ್, ಭಜನಾ ಸಂಕೀರ್ತನೆಯ ಸಂಯೋಜಕಿ ಉಷಾ ಶಿವರಾಮ ಭಟ್ ಉಪಸ್ಥಿತರಿದ್ದರು.
ಶ್ರೀಸÀದಾಶಿವ ದೇವಸ್ಥಾನದ ಮೊದಲ ಬ್ರಹ್ಮಕಲಶೋತ್ಸವವನ್ನು ನಡೆಸಿದ ಏತಡ್ಕ ಸುಬ್ರಾಯ ಭಟ್ಟರ ಅತ್ಯಂತ ಪ್ರೀತಿಯ ಭಜನೆಯಾದ ಶ್ರೀ ಶಂಕರಾಚಾರ್ಯ ವಿರಚಿತ ಅಕ್ಷರಮಾಲಾ ಸ್ತೋತ್ರವನ್ನು ಅವರು ಹಾಡುತ್ತಾ, ಕುಣಿಯುತ್ತಾ ದೇವರಿಗೆ ಪ್ರದಕ್ಷಿಣೆ ನಡೆಸಿದ್ದರು. ಆ ನೆನಪನ್ನು ಮರುಕಳಿಸುವ ನೆಪದಲ್ಲಿ ಆಯೋಜಿಸಲಾದ ಸಾಂಬಸದಾಶಿವ ಭಜನೆಯಲ್ಲಿ ಭಗವದ್ಭಕ್ತರು ಕುಣಿದು ಪುಳಕಿತರಾದರು. ಮಾತೆಯರು, ಮಹನೀಯರು, ಮಕ್ಕಳು, ಹಿರಿಯರೂ ಭಗವನ್ನಾಮಾರ್ಚನೆಯಲ್ಲಿ ಪಾಲ್ಗೊಂಡಿದ್ದರು. ಅ ಅಕ್ಷರದಿಂದ ಅದ್ಭುತ ವಿಗ್ರಹ ಅಮರಾಧೀಶ್ವರ ಎಂದು ಆರಂಭವಾಗುವ ಭಜನೆ ಳಾಳಿತ ಭಕ್ತಜನೇಶ ಎಂದು ಕೊನೆಗೊಳ್ಳುತ್ತದೆ. ರಾಮಕೃಷ್ಣ ಕಾಟುಕುಕ್ಕೆ ಅವರು ಹಾಡನ್ನು ಅದ್ಭುತವಾಗಿ ಹಾಡಿ ಜನಮನಸೂರೆಗೊಂಡರು. ಹಾರ್ಮೋನಿಯಂನಲ್ಲಿ ಸತ್ಯನಾರಾಯಣ ಐಲ, ಜಗದೀಶ್ ಉಪ್ಪಳ ಜೊತೆಗೂಡಿದರು. ಯುವ ಚಿತ್ರಕಲಾವಿದೆ ಶ್ರೀಲಕ್ಷ್ಮೀ ಕುಳೂರು ಕುಂಚದಲ್ಲಿ ಹಾಡಿನೊಂದಿಗೆ ಸದಾಶಿವ ಚಿತ್ರರಚನೆ ಮೂಲಕ ಗಮನಸೆಳೆದರು. ಸಮಿತಿಯ ಸಂಚಾಲಕರುಗಳಾದ ಚಂದ್ರಶೇಖರ ಏತಡ್ಕ ಹಾಗೂ ಡಾ. ವೈ.ವಿ.ಕೃಷ್ಣಮೂರ್ತಿ, ವೈ.ವಿ.ರಮೇಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.