ನ್ಯೂಯಾರ್ಕ್: ಅಮೆರಿಕ ಗುಪ್ತಚರ ಸಂಸ್ಥೆಯ (ಎಫ್‌ಬಿಐ) ಉಪನಿರ್ದೇಶಕರಾಗಿ ಡಾನ್ ಬೊಂಗಿನೊ ಅವರನ್ನು ನೇಮಕ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
'ನಮ್ಮ ದೇಶದ ಬಗ್ಗೆ ಅಪಾರ ಪ್ರೀತಿ ಮತ್ತು ಉತ್ಸಾಹದ ವ್ಯಕ್ತಿಯಾಗಿರುವ ಡಾನ್ ಬೊಂಗಿನೊ ಅವರನ್ನು ಉಪನಿರ್ದೇಶಕರನ್ನಾಗಿ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಹೆಸರಿಸಿದ್ದಾರೆ.
ಡಾನ್ ಬೊಂಗಿನೊ ಅವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜತೆಗೆ, ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಸದಸ್ಯರಾಗಿದ್ದರು. ಈಗ ಅವರು ದೇಶದ ಅತ್ಯಂತ ಯಶಸ್ವಿ ಪಾಡ್‌ಕಾಸ್ಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇದೀಗ ನಮ್ಮೊಂದಿಗೆ ಕೆಲಸ ಮಾಡಲು ಸಿದ್ಧರಿರುವ ಅವರಿಗೆ ಅಭಿನಂದನೆಗಳು' ಎಂದು ಟ್ರಂಪ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐನ 9ನೇ ನಿರ್ದೇಶಕರಾಗಿ ನೇಮಕಗೊಂಡಿರುವ ಭಾರತ ಮೂಲದ ಕಾಶ್ ಪಟೇಲ್ ಅವರು ಶನಿವಾರ (ಫೆ.22) ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕಾಶ್ ಪಟೇಲ್ ಅವರು ಅಮೆರಿಕ ಗುಪ್ತಚರ ಸಂಸ್ಥೆ (ಎಫ್‌ಬಿಐ) ನಿರ್ದೇಶಕರ ಹುದ್ದೆಯನ್ನೇರಿದ ಮೊದಲ ಭಾರತೀಯ- ಅಮೆರಿಕನ್ ಎನಿಸಿಕೊಂಡಿದ್ದಾರೆ.
ಗುಜರಾತ್ ಮೂಲದ ದಂಪತಿಯ ಮಗನಾದ ಕಾಶ್ ಪಟೇಲ್ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಹಿಂದೆಯೇ ಎಫ್‌ಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದರು. ಅವರ ನೇಮಕವನ್ನು ಅಮೆರಿಕದ ಸೆನೆಟ್ ಈಚೆಗೆ 51-49 ಮತಗಳಿಂದ ದೃಢಪಡಿಸಿತ್ತು.