ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮವು ಹೊಸ ಸ್ವರೂಪದಲ್ಲಿ ನಡೆಯಲಿದೆ. ಹಾಗೆಯೇ ರಾಷ್ಟ್ರಪತಿ ಭವನದ ಹಿನ್ನೆಲೆಯಲ್ಲಿ ವಿಸ್ತಾರವಾದ ದೃಶ್ಯಗಳು ಮತ್ತು ಸಂಗೀತವನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ರಾಷ್ಟ್ರಪತಿಯ ಅಂಗರಕ್ಷಕರು ಪ್ರತಿ ವಾರ ಬದಲಾಗುತ್ತಾರೆ. ಹೀಗೆ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮವನ್ನು ಸೇನಾ ಪರಂಪರೆಯ ಭಾಗವಾಗಿ ಇಂದಿಗೂ ಆಯೋಜಿಸಲಾಗುತ್ತದೆ.
'ಇನ್ನು ಮುಂದೆ ವಿಸ್ತಾರವಾದ ಪ್ರದೇಶದಲ್ಲಿ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ' ಎಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.
2007ರಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. 2012ರಲ್ಲಿ ಅಂಗರಕ್ಷಕರ ಬದಲಾವಣೆ ಸಮಾರಂಭವನ್ನು ಸಾರ್ವಜನಿಕ ಕಾರ್ಯಕ್ರಮವನ್ನಾಗಿ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.