ನವದೆಹಲಿ: 'ಸದನದಲ್ಲಿ ತಾವು ಮಾತನಾಡಿದ ನಂತರ, ಮತ್ತೊಬ್ಬರ ಮಾತುಗಳನ್ನು ಆಲಿಸದೆ ಹೊರಹೋಗುವ ಸದಸ್ಯರಿಗೆ ರೂಲಿಂಗ್ ನೀಡಲಾಗುವುದು' ಎಂದು ಸಭಾಪತಿ ಜಗದೀಪ್ ಧನಕರ್ ಮಂಗಳವಾರ ಹೇಳಿದರು.
ಕೇಂದ್ರ ಬಜೆಟ್ ಕುರಿತಂತೆ ರಾಜ್ಯಸಭೆಯ ಪಕ್ಷೇತರ ಸಂಸದ ಕಪಿಲ್ ಸಿಬಲ್ ಅವರು ಮಾತನಾಡಿದ ನಂತರ ಸದನದಿಂದ ಹೊರಹೋಗಿದ್ದನ್ನು, ಬಿಜೆಪಿಯ ಸಂಸದ ಘನಶ್ಯಾಮ್ ತಿವಾರಿ ಅವರು ಪ್ರಸ್ತಾಪಿಸಿದ್ದಕ್ಕೆ ಸಭಾಪತಿ ಈ ರೀತಿ ಪ್ರತಿಕ್ರಿಯಿಸಿದರು.
ಸಂಸತ್ತಿನಲ್ಲಿ ಸುದೀರ್ಘ ಅನುಭವ ಹೊಂದಿರುವ ತಿವಾರಿ ಅವರು, 'ತಮ್ಮ ಮಾತು ಮುಗಿದೊಡನೆ ಸದನದಿಂದ ಹೊರಹೋಗಬಹುದೇ? ತಮ್ಮ ಅಭಿಪ್ರಾಯ ಹೇಳಲು ಮಾತ್ರ ಸಂಸತ್ತಿಗೆ ಬರಬೇಕೇ' ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ' ಎಂದು ಧನಕರ್ ಹೇಳಿದರು.
ಕಪಿಲ್ ಸಿಬಲ್ ಮಾತುಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಹಿರಿಯ ಸದಸ್ಯರ ಉಪಸ್ಥಿತಿಯನ್ನು ಸದನ ಬಯಸುತ್ತದೆ ಎಂದರು.
ಗಂಭೀರ ಲೋಪ
ಆಯಾ ಕಾಲಘಟ್ಟದಲ್ಲಿ ಸಂಸತ್ತು ಮಾಡಿದ ತಿದ್ದುಪಡಿಗಳನ್ನು ಒಳಗೊಂಡಿರುವ ಸಂವಿಧಾನವೇ ಅಧಿಕೃತ. ಇವುಗಳಲ್ಲಿ ಕೆಲವನ್ನು ಕೈಬಿಟ್ಟು ಮುದ್ರಿಸುವುದು ಲೋಪ. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಧನಕರ್ ಹೇಳಿದರು.
ಬಿಜೆಪಿಯ ರಾಧಾಮೋಹನ್ ದಾಸ್ ಅಗರ್ವಾಲ್ ಅವರು, ದೇಶದಲ್ಲಿ ಇಂದು ಮಾರಾಟವಾಗಿರುವ ಸಂವಿಧಾನದ ಬಹುತೇಕ ಪ್ರತಿಗಳಲ್ಲಿ ಕೆಲವೊಂದು ಕಿರುರೂಪಗಳು ಇಲ್ಲವಾಗಿವೆ ಎಂದು ಪ್ರಸ್ತಾಪಿಸಿದ್ದಕ್ಕೆ, ಧನಕರ್ ಮೇಲಿನಂತೆ ಪ್ರತಿಕ್ರಿಯಿಸಿದರು.