ರಾಂಚಿ: ಉನ್ನತ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯನ್ನು (ಎಐ) ಸಮಗ್ರವಾಗಿ ಅಳವಡಿಸಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಅಲ್ಲದೆ, ಸಮಾಜದ ಕಟ್ಟಕಡೆಯ ಸಮುದಾಯಗಳ ಮೇಲೆ ಎಐ ಬೀರಲಿರುವ ಪರಿಣಾಮದ ಬಗ್ಗೆಯೂ ಕಾಳಜಿ ವಹಿಸುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಹೇಳಿದರು.
ಜಾರ್ಖಂಡ್‌ಗೆ ಎರಡು ದಿನಗಳು ಭೇಟಿ ಕೈಗೊಂಡಿರುವ ಅವರು, ರಾಂಚಿಯಲ್ಲಿ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಮೆಸ್ರಾದ ಪ್ಲಾಟಿನಂ ಜುಬಿಲಿ ಸಮಾರಂಭದಲ್ಲಿ ಮಾತನಾಡಿದರು.
'ಎಐ ಮತ್ತು ಇತರ ತಂತ್ರಜ್ಞಾನಗಳು ತಂದಿರುವ ಬದಲಾವಣೆಯು ನಮ್ಮ ಭಾಷೆಗಳಲ್ಲಿಯೂ ಪ್ರತಿಫಲಿಸುತ್ತದೆ. ಕೆಲವು ವರ್ಷಗಳ ಹಿಂದೆ, 'ಅಡೆತಡೆ' ಎಂಬುದು ಚಿಂತಿಸಬೇಕಾದ ಸಂಗತಿಯಾಗಿತ್ತು. ಆದರೆ ಈಗ ಅದು ಸಕಾರಾತ್ಮಕ ಅರ್ಥವನ್ನು ಹೊಂದಿದೆ. ವಿರಾಮ ಅಥವಾ ಅಡಚಣೆಯನ್ನು ಈಗ ಸಾಮಾನ್ಯ ಸಂಗತಿಯಾಗಿ ಸ್ವೀಕರಿಸಲಾಗುತ್ತಿದೆ' ಎಂದರು.
'ತಂತ್ರಜ್ಞಾನವು ಸಮಾಜಗಳಲ್ಲಿ ದೊಡ್ಡ ಅಡೆತಡೆಗಳನ್ನು ಸೃಷ್ಟಿಸುವುದರಿಂದ, ಸಮಾಜದ ಕಟ್ಟಕಡೆಯ ಸಮುದಾಯಗಳ ಮೇಲೆ ಇದು ಉಂಟುಮಾಡುವ ಪರಿಣಾಮದ ಬಗ್ಗೆಯೂ ನಾವು ಕಾಳಜಿ ವಹಿಸಬೇಕು. ಎಐನಿಂದ ಸೃಷ್ಟಿಯಾಗುತ್ತಿರುವ ಉತ್ತಮ ಅವಕಾಶಗಳು ಎಲ್ಲರಿಗೂ ಲಭ್ಯವಾಗಬೇಕು' ಎಂದು ಅವರು ಹೇಳಿದರು.
ಆರ್ಥಿಕತೆಯ ಮೇಲೆ ಹೊಸ ತಂತ್ರಜ್ಞಾನದ ವಿಚ್ಛಿದ್ರಕಾರಿ ಪರಿಣಾಮದ ಬಗ್ಗೆ ಒತ್ತಿಹೇಳಿದ ಮುರ್ಮು ಅವರು, 'ಮುಂಬರುವ ವರ್ಷಗಳು ವಿಶೇಷವಾಗಿ, ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ದೂರಗಾಮಿ ಪರಿಣಾಮ ಬೀರುವಂತಹ ಅಭಿವೃದ್ಧಿಯಾಗುವ ಸಾಧ್ಯತೆಗಳಿವೆ' ಎಂದರು.
ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ನಡೆಯುತ್ತಿರುವ ಪೈಪೋಟಿಯ ನಡುವೆ, ಸೈಬರ್ ಭದ್ರತೆ ಮತ್ತು ಡಿಜಿಟಲ್ ಅಂತರಗಳ ಅಪಾಯದ ಬಗ್ಗೆ ಎಚ್ಚರವಹಿಸುವ ಅಗತ್ಯವಿದೆ ಎಂದರು.