ತಿರುವನಂತಪುರಂ: ಬಲರಾಮಪುರಂನಲ್ಲಿ ಕೊಲೆಯಾದ ಎರಡು ವರ್ಷದ ಬಾಲಕಿಯ ತಾಯಿ ಶ್ರೀತು ಅವರನ್ನು ಹಣಕಾಸು ವಂಚನೆ ಪ್ರಕರಣದಲ್ಲಿ ಪೋಲೀಸರು ಬಂಧಿಸಿದ್ದಾರೆ.
ದೇವಸ್ವಂ ಮಂಡಳಿಯಲ್ಲಿ ಚಾಲಕನ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಶ್ರೀತು ವಂಚಿಸಿದ್ದಾರೆ ಎಂದು ಪೋಲೀಸರಿಗೆ ಹಲವಾರು ದೂರುಗಳು ಬಂದಿದ್ದವು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ.
ಪ್ರಕರಣವೆಂದರೆ ಶ್ರೀತು ಅವರು ದೇವಸ್ವಂ ಮಂಡಳಿಯ ಸೆಕ್ಷನ್ ಆಫೀಸರ್ ಹೆಸರಿನಲ್ಲಿ ಶಿಜು ಎಂಬ ವ್ಯಕ್ತಿಗೆ ನೇಮಕಾತಿ ಆದೇಶವನ್ನು ಹಸ್ತಾಂತರಿಸಿ ಅದರಲ್ಲಿ 10 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪೋಲೀಸರಿಗೆ ಬಂದ ಹತ್ತು ದೂರುಗಳಲ್ಲಿ ಇದೂ ಒಂದು. ಇತರ ದೂರುಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಕೆ.ಎಸ್.ಸುದರ್ಶನ್ ಮಾಹಿತಿ ನೀಡಿರುವರು.
ಎರಡು ವರ್ಷದ ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಿದ ಪ್ರಕರಣದ ಸುತ್ತಲಿನ ನಿಗೂಢತೆಯನ್ನು ಪೋಲೀಸರು ಇನ್ನೂ ಭೇದಿಸಲು ಸಾಧ್ಯವಾಗಿಲ್ಲ. ಪೋಲೀಸರ ವಿಚಾರಣೆಯ ವೇಳೆ ಮಗುವಿನ ಮಾವ ಹರಿಕುಮಾರ್, ತಾನೇ ಈ ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಕಂಬಿಗಳ ಹಿಂದೆ ಈಗಾಗಲೇ ಬಂದಿಯಾಗಿದ್ದಾನೆ.
ಆದರೆ, ಹೀಗೆ ಏಕೆ ಮಾಡಲಾಯಿತು ಎಂಬುದರ ಕುರಿತು ಪೋಲೀಸರಿಗೆ ಯಾವುದೇ ನಿಖರವಾದ ಮಾಹಿತಿ ಲಭಿಸಿಲ್ಲ. ಘಟನೆಯ ತನಿಖೆ ನಡೆಯುತ್ತಿರುವಾಗಲೇ, ಮಗುವಿನ ತಾಯಿ ಶ್ರೀತು ವಿರುದ್ಧ ಆರ್ಥಿಕ ವಂಚನೆ ಪ್ರಕರಣ ದಾಖಲಾಗಿರುವುದು ಅಚ್ಚರಿಮೂಡಿಸಿದೆ.