ಇಂಫಾಲ್: ಮಣಿಪುರದ ಕಾಕ್ಚಿಂಗ್ ಜಿಲ್ಲೆಯಲ್ಲಿ ಗ್ರಾಮ ಸ್ವಯಂಸೇವಕರ ಬಂಧನ ಖಂಡಿಸಿ ಪ್ರತಿಭಟನಕಾರರು ಇಂಫಾಲ್ ಕಣಿವೆಯಾದ್ಯಂತ ಶುಕ್ರವಾರ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಇಂಫಾಲ್‌ನ ವಾಂಗ್‌ಖೇ, ಉರಿಪೋಕ್, ತಂಗ್‌ಮೈಬಾಂಡ್ ಮತ್ತು ಖುರೈ ಪ್ರದೇಶಗಳಲ್ಲಿ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಪ್ರತಿಭಟನ ಕಾರರು ಬಂದ್ ಮಾಡಿಸಿದರು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಪಂಜಾವೋ ಪಲ್ಲುಮ್ಡಾದಲ್ಲಿ ನಸುಕಿನಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ ಸಿಬ್ಬಂದಿ, 10ಕ್ಕೂ ಹೆಚ್ಚು ಗ್ರಾಮ ಸ್ವಯಂಸೇವಕರನ್ನು ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೂಟಿ ಮಾಡಿದ ಮತ್ತು ಅಕ್ರಮವಾಗಿ ಇಟ್ಟುಕೊಂಡಿರುವ ಶಸ್ತ್ರಾಸ್ತ್ರಗಳನ್ನು ವಾರದೊಳಗೆ ಸ್ವಯಂಪ್ರೇರಿತವಾಗಿ ಒಪ್ಪಿಸುವಂತೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಗಡುವು ನೀಡಿ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಮರು ದಿನವೇ ಭದ್ರತಾ ಪಡೆ ಸಿಬ್ಬಂದಿ ಸ್ವಯಂ ಸೇವಕರನ್ನು ಬಂಧಿಸಿದ್ದಾರೆ.
17 ಉಗ್ರರ ಬಂಧನ: ನಿಷೇಧಿತ ಸಂಘಟನೆಗಳಿಗೆ ಸೇರಿದ 17 ಮಂದಿ ಉಗ್ರರನ್ನು ಕಳೆದ 24 ತಾಸುಗಳಲ್ಲಿ ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.