ಷಟೌಕ್ವಾ : ಭಾರತೀಯ ಮೂಲದ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಚಾಕು ಇರಿತ ಪ್ರಕರಣದಲ್ಲಿ ಆರೋಪಿ ಹಾದಿ ಮಟರ್ ದೋಷಿ ಎಂದು ನ್ಯೂಯಾರ್ಕ್ ನ್ಯಾಯಾಲಯ ತೀರ್ಪು ನೀಡಿದೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿ ಉಲ್ಲೇಖಿಸಿ ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಸಂಘಟಿತ ಭಯೋತ್ಪಾದನೆ ಪ್ರಕರಣದಲ್ಲಿ ದೋಷಿಯಾಗಿರುವ ಮಟರ್‌ಗೆ ಏಪ್ರಿಲ್ 23ರಂದು ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. 32 ವರ್ಷಗಳವರೆಗೂ ಮಟರ್‌ಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಪ್ರಕರಣದ ಹಿನ್ನೆಲೆ:
2022ರ ಆಗಸ್ಟ್ 12ರಂದು ನ್ಯೂಯಾರ್ಕ್ ಸಮೀಪದ ಷಟೌಕ್ವಾ ಎಂಬಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಶ್ದಿ ಅವರ ಮೇಲೆ ಮಟರ್ ದಾಳಿ ನಡೆಸಿ, ಚಾಕುವಿನಿಂದ ಇರಿದಿದ್ದ. ಷಟೌಕ್ವಾ ಇನ್‌ಸ್ಟಿಟ್ಯೂಟ್ ಆಯೋಜಿಸಿದ್ದ ಕಲೆ ಮತ್ತು ಸಾಹಿತ್ಯದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದ್ದರು. ರಶ್ದಿ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ವೇದಿಕೆಗೆ ನುಗ್ಗಿದ ಮಟರ್ ಅವರಿಗೆ ಚಾಕುವಿನಿಂದ ಇರಿದಿದ್ದ.
ದಾಳಿಯಿಂದಾಗಿ ರಶ್ದಿ ಅವರು ಅವರು ಒಂದು ಕಣ್ಣಿನ ದೃಷ್ಟಿ ಮತ್ತು ಕೈಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಮಟರ್‌ನನ್ನು ಬಂಧಿಸಲಾಗಿತ್ತು.
'ರಶ್ದಿ ಬದುಕುಳಿದಿದ್ದಾರೆ ಎಂಬುದನ್ನು ಕೇಳಿ ಆಶ್ಚರ್ಯವಾಯಿತು'
ಷಟೌಕ್ವಾ ಕೌಂಟಿ ಜೈಲಿನಿಂದ ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿದ್ದ ಮಟರ್, 'ರಶ್ದಿ ಅವರ ಮೇಲಿನ ದಾಳಿ ನನ್ನ ಸ್ವಂತ ನಿರ್ಧಾರವಾಗಿತ್ತು. ಅವರು (ರಶ್ದಿ) ಬದುಕುಳಿದಿದ್ದಾರೆ ಎಂಬುದನ್ನು ಕೇಳಿದಾಗ ನನಗೆ ಆಶ್ಚರ್ಯವಾಯಿತು' ಎಂದಿದ್ದ. ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕೋರ್‌ನೊಂದಿಗೆ (ಐಆರ್‌ಜಿಸಿ) ಸಂಪರ್ಕದಲ್ಲಿರುವುದನ್ನು ನಿರಾಕರಿಸಿದ್ದ ಆತ, 'ನಾನೊಬ್ಬನೇ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದೇನೆ. ರಶ್ದಿ ಅಪ್ರಜ್ಞಾಪೂರ್ವಕವಾಗಿ ವರ್ತಿಸಿದ್ದಾರೆ. ಹೀಗಾಗಿ ಸ್ವಇಚ್ಛೆಯಿಂದ ದಾಳಿ ಮಾಡಿದ್ದೇನೆ' ಎಂದೂ ಹೇಳಿದ್ದ.
ಸಲ್ಮಾನ್ ರಶ್ದಿ ಸಂಕ್ಷಿಪ್ತ ಪರಿಚಯ
1947ರಲ್ಲಿ ಮುಂಬೈನಲ್ಲಿ ಜನಿಸಿದ ರಶ್ದಿ, ಬ್ರಿಟನ್‌ಗೆ ತೆರಳಿ ವಿದ್ಯಾಭ್ಯಾಸವನ್ನು ಅಲ್ಲಿಯೇ ಪಡೆದರು. ವಿದ್ಯಾಭ್ಯಾಸದ ನಂತರ ಅವರು ಅಲ್ಲಿಯೇ ನೆಲೆಸಿದ್ದರು. ಅವರು 14 ಕೃತಿಗಳನ್ನು ರಚಿಸಿದ್ದಾರೆ. ಅವರ ಕೆಲವು ಕೃತಿಗಳು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರಿಂದಾಗಿ ಅವರು ಬೆದರಿಕೆ ಕರೆಗಳನ್ನು ಎದುರಿಸಿದ್ದಾರೆ.
1981ರಲ್ಲಿ ಪ್ರಕಟವಾದ 'ಮಿಡ್‌ನೈಟ್ಸ್ ಚಿಲ್ಡ್ರನ್' ಎಂಬ ಕಾದಂಬರಿಯ ಮೂಲಕ ರಶ್ದಿ ಪ್ರಸಿದ್ಧಿಗೆ ಬಂದರು. ಈ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿತ್ತು. ಸ್ವಾತಂತ್ರ್ಯೋತ್ತರ ಭಾರತದ ಕತೆಯನ್ನು ಈ ಕಾದಂಬರಿ ಹೊಂದಿದೆ.
1998ರಲ್ಲಿ ಪ್ರಕಟವಾದ 'ದಿ ಸಟಾನಿಕ್ ವರ್ಸ್‌ಸ್' ಕೃತಿ ಅವರಿಗೆ ಭಾರಿ ಜನಪ್ರಿಯತೆ ತಂದುಕೊಡುವ ಜೊತೆಗೆ, ಜೀವ ಬೆದರಿಕೆಗೂ ಕಾರಣವಾಗಿತ್ತು. ರಶ್ದಿ ಅವರು ಬರೆದ 'ಸಟಾನಿಕ್ ವರ್ಸಸ್' ಎಂಬ ಕಾದಂಬರಿಯಲ್ಲಿ ಇಸ್ಲಾಂ ಧರ್ಮಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿ ಅವರ ಹತ್ಯೆಗೆ 1989ರಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತ್ ಉಲ್ಲಾ ಖೊಮೇನಿ ಫತ್ವಾ ಹೊರಡಿಸಿದ್ದರು. ಹಾಗಾಗಿ ಅವರು ಹಲವು ದಶಕಗಳ ಕಾಲ ಅಜ್ಞಾತವಾಸದಲ್ಲಿಯೂ ಇದ್ದರು.