ಕೊರೊನಾವೈರಸ್ (SARS-CoV-2) ಹಾದಿಯಲ್ಲೇ ಸಾಂಕ್ರಾಮಿಕ ರೋಗವನ್ನು ಹರಡುವಂಥಹ ಹೊಸ ಬಗೆಯ ವೈರಸ್ ಒಂದು ಬಾವಲಿಯ ಮೂಲಕ ಮನುಷ್ಯನ ದೇಹ ಪ್ರವೇಶಿಸಿದೆ ಎಂದು ಚೀನಿ ಸಂಶೋಧಕರು ಅಧ್ಯಯನದ ಮೂಲಕ ಹೇಳಿದ್ದಾರೆ.
ಬಾವಲಿ ಮೂಲಕ ಮಾನವನ ದೇಹ ಹೊಕ್ಕಿರುವ ಈ ಹೊಸ ಬಗೆಯ ವೈರಸ್‌ಗೆ ಚೀನಿ ಸಂಶೋಧಕರು HKU5-CoV-2 ಎಂದು ನಾಮಕರಣ ಮಾಡಿದ್ದಾರೆ.
ಈ ಹೊಸ ಬಗೆಯ ಅಪಾಯಕಾರಿ ವೈರಸ್ ಕೊರೊನಾವೈರಸ್‌ನಂತೆ ಮಾನವನ ಜೀವಕೋಶದ ಪ್ರೋಟಿನ್‌ಗಳನ್ನು ಹಾನಿ ಮಾಡಿ ಒಬ್ಬರಿಂದ ಮತ್ತೊಬ್ಬರಿಗೆ ಗಾಳಿಯ ಮೂಲಕ ರೋಗ ಹರಡಬಹುದು ಎಂದು ಹೇಳಿದ್ದಾರೆ.
ಅದಾಗ್ಯೂ monoclonal antibodies ಎಂಬ ಪ್ರತಿಕಾಯಗಳು ಬಾವಲಿ ಮೂಲಕ ಹೊರ ಬಂದಿರುವ ವೈರಸ್ ಅನ್ನು ನಾಶಪಡಿಸಬಹುದು ಎಂಬ ಸತ್ಯವನ್ನು ಚೀನಿ ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಮಿನ್ನೇಸೋಟ ವಿಶ್ವವಿದ್ಯಾಲಯದಲ್ಲಿ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕೆಲ್ ಓಸ್ಟರ್‌ಹೋಮ್, 'ಚೀನಿ ಸಂಶೋಧಕರ ವರದಿಯು ಹೊಸ ವೈರಸ್ ಬಗ್ಗೆ ಉತ್ಪ್ರೇಕ್ಷೆಯನ್ನು ಹೊರಹಾಕಿದೆ. ಅದಾಗ್ಯೂ ಕೋವಿಡ್-19 ನಂತರ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಹೊಸ ವೈರಸ್ ಯಾವುದೇ ಹಾನಿ ಮಾಡದು' ಎಂದಿದ್ದಾರೆ.
2019 ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ SARS-CoV-2 ವೈರಸ್ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ತಲ್ಲಣವನ್ನೇ ಸೃಷ್ಟಿಸಿತ್ತು. ಈ ವೈರಸ್‌ನಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ.