ನವದೆಹಲಿ: 2023ರಲ್ಲಿ ರೂಪಿಸಿದ ಕಾಯ್ದೆಗೆ ಅನುಗುಣವಾಗಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಹಾಗೂ ಚುನಾವಣಾ ಆಯುಕ್ತರನ್ನು (ಇ.ಸಿ) ನೇಮಕ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ಅರ್ಜಿಗಳನ್ನು ಹೋಳಿ ಹಬ್ಬದ ನಂತರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂಬ ಸೂಚನೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ನೀಡಿದೆ.
ಅರ್ಜಿಯ ಬಗ್ಗೆ ತುರ್ತಾಗಿ ಗಮನ ಹರಿಸಬೇಕಾಗಿದೆ ಎಂದು ಅರ್ಜಿದಾರ 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪೀಠಕ್ಕೆ ಮನವಿ ಮಾಡಿದರು.
ಸಿಇಸಿ ಮತ್ತು ಇ.ಸಿ ನೇಮಕವು 2023ರಲ್ಲಿ ಸಂವಿಧಾನ ಪೀಠ ನೀಡಿದ್ದ ತೀರ್ಪಿಗೆ ಅನುಗುಣವಾಗಿ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಇರುವ ಸಮಿತಿಯ ಮೂಲಕ ಆಗಬೇಕೇ ಅಥವಾ ಸಿಜೆಐ ಅವರನ್ನು ಹೊರಗಿರಿಸಿರುವ 2023ರ ಕಾಯ್ದೆಯ ಪ್ರಕಾರ ಆಗಬೇಕೇ ಎಂಬ ಪ್ರಶ್ನೆಯು ಅರ್ಜಿಯಲ್ಲಿದೆ ಎಂದು ಭೂಷಣ್ ವಿವರಿಸಿದರು.
ಅರ್ಜಿದಾರರ ಪೈಕಿ ಒಬ್ಬರಾದ ಜಯಾ ಠಾಕೂರ್ ಪರವಾಗಿ ಹಾಜರಿದ್ದ ವಕೀಲ ವರುಣ್ ಠಾಕೂರ್ ಅವರು, ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು. ಆದರೆ, ಎಲ್ಲ ವಿಷಯಗಳೂ ನ್ಯಾಯಾಲಯಕ್ಕೆ ಮುಖ್ಯವೇ ಆಗಿರುತ್ತದೆ, ಯಾವುದೇ ಒಂದು ಪ್ರಕರಣವು ಇತರೆಲ್ಲ ಪ್ರಕರಣಗಳಿಗಿಂತ ಹೆಚ್ಚಿನದಾಗಿರುವುದಿಲ್ಲ ಎಂದು ಪೀಠವು ಹೇಳಿತು.
2023ರ ಕಾಯ್ದೆಯ ಅಡಿಯಲ್ಲಿ ಸಿಇಸಿ, ಇ.ಸಿ ನೇಮಕ ಮಾಡುವುದನ್ನು ಪ್ರಶ್ನಿಸಿರುವ ಅರ್ಜಿಗಳನ್ನು 'ಆದ್ಯತೆಯ ಮೇರೆಗೆ' ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಪೀಠವು ಫೆಬ್ರುವರಿ 18ರಂದು ಹೇಳಿತ್ತು. ಅರ್ಜಿಗಳನ್ನು ಫೆಬ್ರುವರಿ 19ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಪೀಠವು ಫೆಬ್ರುವರಿ 12ರಂದು ಹೇಳಿತ್ತು. ಈ ನಡುವಿನ ಅವಧಿಯಲ್ಲಿ ಏನಾದರೂ ಆದಲ್ಲಿ, ಅದಕ್ಕೆ ಪರಿಣಾಮಗಳು ಇರುತ್ತವೆ ಎಂದು ಕೂಡ ಹೇಳಿತ್ತು.