ವಿಟ್ಲ : ಬೋಳಂತೂರು ನಾರ್ಶ ಸುಲೈಮಾನ್ ಹಾಜಿ ಅವರ ಮನೆಗೆ ಇಡಿ ಅಧಿಕಾರಿಗಳಂತೆ ನಟಿಸಿ, ದಾಳಿ ಮಾಡಿ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಓರ್ವ ಆರೋಪಿಯು ಕೇರಳದ ಪೊಲೀಸ್ ಎಂಬ ಮಾಹಿತಿ ಆತಂಕ ಮೂಡಿಸಿದೆ.
ತ್ರಿಶೂರು ಕೊಡಂಗಲ್ಲೂರು ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿದ್ದ ಶಹೀರ್ ಬಾಬು (49) ಅವನನ್ನು ವಿಟ್ಲ ಪೊಲೀಸರು ಬಂಧಿಸಿ, ಕರೆತಂದಿದ್ದಾರೆ. ಇಕ್ಬಾಲ್ ಪರ್ಲಿಯ ಬಂಟ್ವಾಳ (38), ಸಿರಾಜುದ್ದೀನ್ ನಾರ್ಶ (37) ಮತ್ತು ಅಬ್ಸಾರ್ ಬಜಾಲ್ (28) ಅವರು ಬಂಧಿಸಲ್ಪಟ್ಟ ಇತರ ಮೂವರು ಆರೋಪಿಗಳು.
ಕೇರಳದ ಕೊಡಂಗಲ್ಲೂರು ಪೊಲೀಸ್ ಠಾಣೆಯ ಎಎಸ್‌ಐ ಶಹೀರ್ ಬಾಬು ನಕಲಿ ಇ.ಡಿ ತಂಡವನ್ನು ಕಟ್ಟಿ ತನ್ನ ಪಾಲಿನ ಮೊತ್ತವನ್ನು ಪಡೆದುಕೊಂಡಿದ್ದಾನೆ. ಈತ ಮಂಗಳೂರಿಗೆ ಬಂದು ಯಾವ ರೀತಿಯಲ್ಲಿ ಯೋಜನೆ ರೂಪಿಸಬೇಕೆಂದು ಮಾರ್ಗದರ್ಶನ ಮಾಡುತ್ತಿದ್ದ. ಇ.ಡಿ ಅಧಿಕಾರಿಗಳಂತೆ ನಟಿಸಲು ಮತ್ತು ದರೋಡೆ ನಡೆಸಲು ಹಾಗೂ ತಪ್ಪಿಸಿಕೊಳ್ಳಲು ಸಮಗ್ರ ಮಾಹಿತಿ ನೀಡಿದ್ದ. ಈತ ತನ್ನ ಮೊತ್ತ ಪಡೆದ ಬಳಿಕ ಎಂದಿನಂತೆ ಪೊಲೀಸ್ ಕೆಲಸಕ್ಕೆ ಹಾಜರಾಗುತ್ತಿದ್ದ. ಕೆಲವೊಮ್ಮೆ ರಜೆ ತೆಗೆಯುತ್ತಿದ್ದ. ಆರಂಭದಲ್ಲಿ ವಿಟ್ಲ ಪೊಲೀಸರು ತಂಡ ರಚಿಸಿ, ಖಚಿತ ಮಾಹಿತಿಯೊಂದಿಗೆ ಕೇರಳಕ್ಕೆ ತೆರಳಿ ದಾಳಿ ಮಾಡುವ ಮಾಹಿತಿ ಈತನಿಗೆ ತಿಳಿದು, ದರೋಡೆಕೋರರು ಪರಾರಿಯಾಗುವಂತೆ ನೋಡಿಕೊಂಡಿದ್ದ.
ಜನವರಿ ಮೂರರಂದು ವಿಟ್ಲ ಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರಿನ ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಮನೆಗೆ ಇ.ಡಿ ಅಧಿಕಾರಿಗಳ ಹೆಸರಲ್ಲಿ ದಾಳಿ ಮಾಡಿ ದರೋಡೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ ಫೆರ್ನಾಂಡಿಸ್, ಸಚಿನ್ ಮತ್ತು ಶಬಿನ್ ಎನ್ನುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇ.ಡಿ ಅಧಿಕಾರಿಯಂತೆ ನಟಿಸಿದ ಪ್ರಧಾನ ಆರೋಪಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ.