ಪಟ್ನಾ: ದೆಹಲಿ ಚುನಾವಣೆಯಲ್ಲಿ ದೊರೆತ ಭರ್ಜರಿ ಗೆಲುವಿನಿಂದ ಹುಮ್ಮಸ್ಸು ಹೆಚ್ಚಿಸಿಕೊಂಡಿರುವ ಬಿಜೆಪಿಯು ಬಿಹಾರದಲ್ಲಿ ಅವಧಿಗೂ ಮುನ್ನವೇ ವಿಧಾನಸಭಾ ಚುನಾವಣೆಯನ್ನು ನಡೆಸುವ ಆಲೋಚನೆ ಹೊಂದಿದೆಯೇ?
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರೂ ಆಗಿರುವ ಸಚಿವ ವಿಜಯ್ ಚೌಧರಿ ಶನಿವಾರ ನೀಡಿದ ಹೇಳಿಕೆಯು ಅವಧಿಪೂರ್ವ ಚುನಾವಣೆಗೆ ಸಂಬಂಧಿಸಿದ ಊಹಾಪೋಹಗಳನ್ನು ಹೆಚ್ಚಿಸುವಂತೆ ಮಾಡಿದೆ.
ನಿಗದಿತ ವೇಳಾಪಟ್ಟಿಯಂತೆ ಬಿಹಾರದಲ್ಲಿ ಈ ವರ್ಷದ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಬೇಕಿದೆ.
'ನಾವು ಯಾವುದೇ ಸಮಯದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಆದರೆ ಚುನಾವಣೆಯನ್ನು ಯಾವಾಗ ನಡೆಸಬೇಕು ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸಲಿದೆ' ಎಂದು ಚೌಧರಿ ಹೇಳಿದ್ದಾರೆ.
ಸ್ಪೀಕರ್ ಕೂಡ ಆಗಿದ್ದ ಚೌಧರಿ ಅವರು ಪ್ರತಿಯೊಂದು ಮಾತನ್ನೂ ಎಚ್ಚರಿಕೆಯಿಂದಲೇ ಆಡುವರು. ಆದ್ದರಿಂದ ಅವರ ಹೇಳಿಕೆಯು ಅನೇಕರಿಗೆ ಅಚ್ಚರಿ ಮೂಡಿಸಿಲ್ಲ. ಬದಲಿಗೆ, ಬಿಹಾರದಲ್ಲಿ ಬೇಗನೇ ಚುನಾವಣೆ ನಡೆಯಬಹುದು ಎಂಬ ವದಂತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಚುನಾವಣೆ ಬೇಗನೇ ನಡೆಯುವ ಸಾಧ್ಯತೆಯನ್ನು ಹೆಚ್ಚಿಸುವ ಇನ್ನೊಂದು ಅಂಶ ನಿತೀಶ್ ಕುಮಾರ್ ಅವರ ಆರೋಗ್ಯ. 'ನಿತೀಶ್ ಅವರು ಆರೋಗ್ಯವಾಗಿರಲಿ' ಎಂದು ಪ್ರತಿಯೊಬ್ಬ ರಾಜಕಾರಣಿಯೂ ಹಾರೈಸುತ್ತಿದ್ದಾರೆ. ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಮರುಸ್ಥಾಪಿಸುವುದರ ಜತೆಯಲ್ಲೇ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿರುವ ನಿತೀಶ್ ಅವರ ನೇತೃತ್ವದಲ್ಲೇ ಎನ್‌ಡಿಎಯು ಚುನಾವಣೆ ಎದುರಿಸಬೇಕೆಂಬುದು ಬಿಜೆಪಿಯ ಬಯಕೆಯಾಗಿದೆ.
ನಿತೀಶ್ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಚುನಾವಣೆಯಲ್ಲಿ ಹೆಚ್ಚಿನ ಸೀಟುಗಳನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.
'ನಿತೀಶ್ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮುಜುಗರ ಉಂಟುಮಾಡಬಹುದು. ಆದ್ದರಿಂದ ಅವಧಿಗೂ ಮುನ್ನವೇ ಚುನಾವಣೆ ನಡೆಯುವುದನ್ನು ಎನ್‌ಡಿಎ ಬಯಸುತ್ತದೆ. ಸಿ.ಎಂ. ಆರೋಗ್ಯವನ್ನು ಪರಿಗಣಿಸಿ ಅವರನ್ನು ಈಗಾಗಲೇ ಮಾಧ್ಯಮಗಳಿಂದ ದೂರ ಇಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ನಿಜಕ್ಕೂ ದುಃಖದ ವಿಚಾರ' ಎಂದು ಕಾಂಗ್ರೆಸ್ ಬಿಹಾರ ಘಟಕದ ಮಾಜಿ ಅಧ್ಯಕ್ಷ ಕೌಕಬ್ ಕಾದ್ರಿ ಹೇಳಿದ್ದಾರೆ.