ನವದೆಹಲಿ: 'ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಪ್ರಜಾಪ್ರಭುತ್ವ ವಿರೋಧಿ ಎನಿಸಿಕೊಳ್ಳುವುದಿಲ್ಲ ಮತ್ತು ಇದು ಒಕ್ಕೂಟ ವ್ಯವಸ್ಥೆಯ ರಚನೆಗೂ ಧಕ್ಕೆ ತರುವುದಿಲ್ಲ' ಎಂದು ಕೇಂದ್ರ ಕಾನೂನು ಸಚಿವಾಲಯ ತಿಳಿಸಿದೆ.
'ಒಂದು ದೇಶ, ಒಂದು ಚುನಾವಣೆ'ಗೆ ಸಂಬಂಧಿಸಿದಂತೆ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಯ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಕಾನೂನು ಸಚಿವಾಲಯದ ಶಾಸನ ರಚನಾ ವಿಭಾಗ ಉತ್ತರ ನೀಡಿದೆ.
ಈ ಹಿಂದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ, ವಿವಿಧ ರಾಜ್ಯಗಳಲ್ಲಿ ಹೇರಲಾದ ರಾಷ್ಟ್ರಪತಿ ಆಳ್ವಿಕೆ ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಪ್ರಕ್ರಿಯೆ ಮುರಿದು ಬಿತ್ತು ಎಂದು ಅದು ವಿವರಿಸಿದೆ.
ಸದಸ್ಯರ ಕೆಲ ಪ್ರಶ್ನೆಗಳಿಗೆ ಉತ್ತರಿಸಲಾಗಿದ್ದು, ಇನ್ನೂ ಕೆಲ ಪ್ರಶ್ನೆಗಳಿಗೆ ವಿಸ್ತೃತ ಮಾಹಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಜಂಟಿ ಸಮಿತಿಯ ಸಭೆ ಮಂಗಳವಾರ ನಡೆಯಲಿದೆ.
ಸಂವಿಧಾನವನ್ನು ಅಳವಡಿಸಿಕೊಂಡ ನಂತರ 1951ರಿಂದ 1967ರವರೆಗೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಮೊದಲ ಸಾರ್ವತ್ರಿಕ ಚುನಾವಣೆ 1951, ಆನಂತರ ಕ್ರಮವಾಗಿ 1957, 1962 ಮತ್ತು 1967ರ ಚುನಾವಣೆಗಳು ಏಕಕಾಲದಲ್ಲಿ ನಡೆದಿದ್ದವು.
ಆದರೆ ಏಕಕಾಲದಲ್ಲಿ ಚುನಾವಣೆ ನಡೆಯುವ ಪ್ರಕ್ರಿಯೆಗೆ 1968 ಮತ್ತು 1969ರಲ್ಲಿ ಅಡೆತಡೆ ಎದುರಾಯಿತು. ಆ ಕಾಲದಲ್ಲಿ ಕೆಲ ರಾಜ್ಯಗಳ ವಿಧಾನಸಭೆಯು ಅವಧಿ ಪೂರ್ವ ವಿಸರ್ಜನೆ ಕಂಡಿದ್ದವು ಎಂದು ಮೂಲಗಳು ತಿಳಿಸಿವೆ.
ಲೋಕಸಭೆಯ ನಾಲ್ಕನೇ ಅವಧಿಯು (1970) ಪೂರ್ಣಾವಧಿ ಪೂರೈಸಲಿಲ್ಲ. ಇದರಿಂದ 1971ರಲ್ಲಿ ಹೊಸದಾಗಿ ಚುನಾವಣೆ ನಡೆಯಿತು. ಲೋಕಸಭೆಯ ಮೊದಲ ಮೂರು ಅವಧಿಯಲ್ಲದೇ, ಎಂಟು, 10, 14 ಮತ್ತು 15ನೇ ಅವಧಿಗಳು ಪೂರ್ಣಾವಧಿ ಪೂರೈಸಿವೆ. ಸಂವಿಧಾನದ 352ನೇ ವಿಧಿಯಡಿ ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ಲೋಕಸಭೆಯ ಐದನೇ ಅವಧಿಯನ್ನು 1977ರವರೆಗೂ ವಿಸ್ತರಿಸಲಾಗಿತ್ತು.
ಉಳಿದಂತೆ ಲೋಕಸಭೆಯ 6, 7, 9, 11, 12 ಮತ್ತು 13ನೇ ಅವಧಿಗಳು ಪೂರ್ಣಾವಧಿಗೂ ಮುನ್ನ ವಿಸರ್ಜನೆಯಾಗಿವೆ. ರಾಜ್ಯ ವಿಧಾನಸಭೆಗಳು ಸಹ ನಿಗದಿತ ಅವಧಿಗೂ ಮುನ್ನ ವಿಸರ್ಜನೆ ಮತ್ತು ಅವಧಿ ವಿಸ್ತರಣೆಗಳನ್ನು ಕಂಡಿವೆ ಎಂದು ಮೂಲಗಳು ತಿಳಿಸಿವೆ.