ನವದೆಹಲಿ: ರಿಯಾಲಿಟಿ ಶೋವೊಂದರಲ್ಲಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ಯೂಟ್ಯೂಬರ್ ರಣವೀರ್ ಅಲ್ಲಾಬಾದಿಯಾ ಕ್ಷಮೆ ಕೇಳಿದ್ದಾರೆ.
ರಣವೀರ್, ಸಮಯ್ ರೈನಾ ಅವರ ಯುಟ್ಯೂಬ್ ರಿಯಾಲಿಟಿ ಶೋ 'ಇಂಡಿಯಾಸ್ ಗಾಟ್ ಲೆಟೆಂಟ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಕಾಮಿಡಿ ರಿಯಾಲಿಟಿ ಶೋ ಆಗಿದೆ.
ಈ ವೇಳೆ ರಣವೀರ್, ಸ್ಪರ್ಧಿಯೊಬ್ಬರ ಬಳಿ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಕೇಳಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಣವೀರ್ ಅವರ ಪಾಡ್‌ಕಾಸ್ಟ್‌ಅನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸೇರಿ ವಿರೋಧ ಪಕ್ಷಗಳ ನಾಯಕರೂ ರಣವೀರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ದೂರ ದಾಖಲಿಸಿಕೊಂಡಿದ್ದಾರೆ
ಈ ವಿಚಾರ ಗಂಭಿರ ಸ್ವರೂಪ ಪಡೆಯುತ್ತಿದ್ದಂತೆ ವಿಡಿಯೊ ಮಾಡಿ ಕ್ಷಮೆ ಕೇಳಿರುವ ರಣವೀರ್, 'ನನ್ನ ಹೇಳಿಕೆ ಅಸಮರ್ಪಕವಾಗಿದೆ. ತಮಾಷೆ ಮಾಡುವುದೊಂದೆ ನನ್ನ ಸಾಮರ್ಥ್ಯವಲ್ಲ, ಈ ಬಗ್ಗೆ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ವೇದಿಕೆಗಳನ್ನು ಈ ರೀತಿಯೇ ಬಳಸಿಕೊಳ್ಳುತ್ತೀರಾ ಎಂದು ಹಲವರು ಕೇಳಿದ್ದೀರಿ. ಖಂಡಿತವಾಗಿ, ಈ ರೀತಿಯಾಗಿ ವೇದಿಕೆಯನ್ನು ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಈಗ ಏನಾಗಿದೆಯೋ ಅದರ ಬಗ್ಗೆ ಯಾವುದೇ ವಿವರಣೆ, ಕಾರಣ ಅಥವಾ ಸ್ಪಷ್ಟನೆ ನೀಡುವುದಿಲ್ಲ. ನಿಮ್ಮ ಬಳಿ ಕ್ಷಮೆಯನ್ನು ಕೇಳುತ್ತೇನೆ. ವೈಯಕ್ತಿಕವಾಗಿ ತೀರ್ಪು ನೀಡಲು ಸೋತಿದ್ದೇನೆ, ಇದು ಒಳ್ಳೆಯ ಘಟನೆಯಲ್ಲ' ಎಂದು ಹೇಳಿದ್ದಾರೆ.
'ವೇದಿಕೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕಿತ್ತು. ನನ್ನ ಹೇಳಿಕೆಯ ವಿಡಿಯೊಗಳನ್ನು ತೆಗೆಯುವಂತೆ ಕೇಳಿಕೊಂಡಿದ್ದೇನೆ. ಈಗ ಕ್ಷಮೆಯೊಂದನ್ನೇ ಕೇಳಬಲ್ಲೆ, ಮಾನವೀಯತೆಯಿಂದ ನನ್ನನ್ನು ಕ್ಷಮಿಸುತ್ತೀರಿ ಎಂದು ಭಾವಿಸುತ್ತೇನೆ' ಎಂದಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಫಡಣವೀಸ್ ಅವರು, 'ಪ್ರತಿಯೊಬ್ಬರಿಗೂ ಮಾತನಾಡುವ ಸ್ವಾತಂತ್ರ್ಯವಿದೆ. ಆದರೆ ಬೇರೆಯವರ ಸ್ವಾತಂತ್ರ್ಯವನ್ನು ಆಕ್ರಮಿಸಿಕೊಂಡರೆ ಅಲ್ಲಿಗೆ ನಮ್ಮ ಸ್ವಾತಂತ್ರ್ಯ ಅಂತ್ಯವಾಗುತ್ತದೆ. ನಮ್ಮ ಸಮಾಜದಲ್ಲಿ ಕೆಲವು ನಿಯಮಗಳಿವೆ. ಅದನ್ನು ಯಾರಾದರೂ ಉಲ್ಲಂಘಿಸಿದರೆ ಅದು ತಪ್ಪಾಗಲಿದೆ. ಅಂತಹವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ' ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಎಕ್ಸ್‌ನಲ್ಲಿ 6 ಲಕ್ಷ, ಇನ್‌ಸ್ಟಾಗ್ರಾಂನಲ್ಲಿ 40 ಲಕ್ಷಕ್ಕೂ ಅಧಿಕ ಹಾಗೂ ಯುಟ್ಯೂಬ್ ಚಾನಲ್‌ಗೆ 10 ಲಕ್ಷಕ್ಕೂ ಹೆಚ್ಚಿನ ಚಂದಾದಾರರನ್ನು ರಣವೀರ್ ಹೊಂದಿದ್ದಾರೆ.