ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಸರ್ಕಾರಿ ಕಚೇರಿ, ಸಂಸ್ಥೆಗಳಲ್ಲಿ ಕನ್ನಡದಲ್ಲೂ ನಾಮ ಫಲಕಗಳಿರಬೇಕೆಂದಿದ್ದರೂ, ಕಾಸರಗೋಡು ರೈಲು ನಿಲ್ದಾಣದಲ್ಲಿ ಕನ್ನಡದ ನಾಮಫಲಕಗಳೇ ಇಲ್ಲ. ಕಾಸರಗೋಡು ರೈಲು ನಿಲ್ದಾಣದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ. ರೈಲು ನಿಲ್ದಾಣದ ವಿವಿಧೆಡೆÉ ಸ್ಥಾಪಿಸಲಾದ ನಾಮಫಲಕಗಳು ಇಂಗ್ಲೀಷ್, ಹಿಂದಿ ಮತ್ತು ಮಲಯಾಳದಲ್ಲಿವೆ. ಕನ್ನಡಕ್ಕೆ ಸ್ಥಾನವನ್ನೇ ನೀಡಿಲ್ಲ. ಕೆಲವು ವರ್ಷಗಳ ಹಿಂದಿನವರೆಗೆ ಕನ್ನಡದಲ್ಲೂ ನಾಮ ಫಲಕಗಳಿತ್ತು. ಬಹುತೇಕ ಮಂದಿ ಕನ್ನಡಿಗರು ಈ ರೈಲು ನಿಲ್ದಾಣವನ್ನು ಆಶ್ರಯಿಸಿದ್ದರೂ, ಕನ್ನಡದಲ್ಲಿ ನಾಮಫಲಕಗಳಿಲ್ಲದಿರುವುದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರೈಲ್ವೇ ಫ್ಲಾಟ್‍ಫಾರಂನ ವಿವಿದೆಡೆ ಹಲವು ನಾಮಫಲಕಗಳಿವೆ. ಅವುಗಳೆಲ್ಲ ಇಂಗ್ಲೀಷ್, ಹಿಂದಿ ಮತ್ತು ಮಲಯಾಳದಲ್ಲಿದೆ. ಅವುಗಳಲ್ಲಿ ಎಲ್ಲಿಯೂ ಕನ್ನಡವನ್ನು ಬಳಸಿಲ್ಲ. ಪ್ರತಿದಿನ ಸಾವಿರಾರು ಮಂದಿ ಪ್ರಯಾಣಿಕರು ತಲುಪುವ ಕಾಸರಗೋಡು ರೈಲು ನಿಲ್ದಾಣದಲ್ಲಿ ಕನ್ನಡದಲ್ಲಿ ನಾಮ ಫಲಕಗಳಿಲ್ಲದಿರುವುದರಿಂದ ಪ್ರಯಾಣಿಕರು ಸಮಸ್ಯೆಗೀಡಾಗುತ್ತಿದ್ದಾರೆ. ಕನ್ನಡ ಮಾತ್ರ ಓದಲು ತಿಳಿದಿರುವ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಕೆಲವು ವರ್ಷಗಳ ಹಿಂದಿನ ವರೆಗೆ ಇಲ್ಲಿ ಕನ್ನಡದಲ್ಲೂ ನಾಮಫಲಕಗಳಿತ್ತು. ಆದರೆ ಇತ್ತೀಚೆಗೆ ಕೆಲವು ವರ್ಷಗಳಿಂದ ಕನ್ನಡ ನಾಮಫಲಕ ಕಣ್ಮರೆಯಾಗಿದೆ.
ಇದೀಗ ಕಾಸರಗೋಡು ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಸಂಬಂಧಪಟ್ಟ ರೈಲ್ವೇ ಅಧಿಕಾರಿಗಳನ್ನು ಸಂಪರ್ಕಿಸಿ ಕನ್ನಡದಲ್ಲೂ ನಾಮಫಲಕ ಅಳವಡಿಸಬೇಕೆಂದು ಕೇಳಿಕೊಂಡಲ್ಲಿ ನಾಮ ಫಲಕ ಬಂದರೂ ಬರಬಹುದು. ಈ ಹಿನ್ನೆಲೆಯಲ್ಲಿ ಇಲ್ಲಿನ ಕನ್ನಡ ಪರ ಸಂಸ್ಥೆಗಳು ಮುತುವರ್ಜಿ ವಹಿಸಬೇಕಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಕನ್ನಡಿಗರು ಕನ್ನಡದ ನಾಮಫಲಕಕ್ಕೆ ಬೇಡಿಕೆ ಸಲ್ಲಿಸದಿದ್ದಲ್ಲಿ ಕುಂಬಳೆ, ಉಪ್ಪಳ, ಮಂಜೇಶ್ವರ ಮೊದಲಾದೆಡೆಗಳಲ್ಲಿರುವ ಕನ್ನಡದ ನಾಮ ಫಲಕಗಳು ಕಣ್ಮರೆಯಾದರೂ ಅಚ್ಚರಿ ಪಡಬೇಕಾಗಿಲ್ಲ !
(ಚಿತ್ರ ಮಾಹಿತಿ 1)ಈಗಿನ ನಾಮ ಫಲಕ, 2)ಕೆಲವು ವರ್ಷಗಳ ಹಿಂದಿನ ನಾಮಫಲಕದಲ್ಲಿ ಕನ್ನಡದಲ್ಲೂ ಇದೆ.)