ಮಹಾಕುಂಭ ನಗರ: ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಮಹಾಕುಂಭ ಮೇಳದಲ್ಲಿ ಕೊಟ್ಯಂತರ ಭಕ್ತರು ಪಾಲ್ಗೊಂಡು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪಾಪ -ಪುಣ್ಯಗಳ ಲೆಕ್ಕಾಚಾರ ಹಾಕುತ್ತಿದ್ದರೆ, ಸಾವಿರಾರು ಗಿಗ್ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರದಿಂದ ಬದುಕನ್ನು ಹಸನಾಗಿಸಿಕೊಂಡಿದ್ದಾರೆ.
ಘಾಟ್‌ಗಳ ಬಳಿ, ರಸ್ತೆ ಬದಿಗಳಲ್ಲಿ ಸಣ್ಣ ಅಂಗಡಿ ಹಾಕಿಕೊಂಡು ಪೂಜಾ ಸಾಮಗ್ರಿ, ದೇವರ ಮೂರ್ತಿಗಳು, ಪ್ಲಾಸ್ಟಿಕ್ ಹೂವಿನ ಮಾಲೆಗಳು, ಪವಿತ್ರ ದಾರಗಳು, ಪುಸ್ತಕಗಳನ್ನು ಮಾರಾಟ ಮಾಡಿ ಆದಾಯ ಗಳಿಸಿಕೊಂಡಿದ್ದಾರೆ.
ಸುಮಾರು 4 ಸಾವಿರ ಎಕರೆ ಪ್ರದೇಶದಲ್ಲಿ ಮಹಾಕುಂಭ ಮೇಳಕ್ಕೆ ಹಾಕಿದ್ದ ಟೆಂಟ್‌ಗಳ ಸುತ್ತಲೂ ವ್ಯಾಪಾರಿಗಳು ಅಂಗಡಿಗಳನ್ನು ಹಾಕಿಕೊಂಡಿದ್ದರು. ಬೀದಿಯಲ್ಲಿ ಸುತ್ತಿ ಆಟಿಕೆ, ಹೂವಿನ ಮಾಲೆ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕಪ್ಪು ಲೋಹದ ಆಭರಣಗಳು, ಬಳೆಗಳು, ತರಕಾರಿ, ಕಿರಾಣಿ ವಸ್ತುಗಳು, ಬೆರಣಿ, ಮರದ ತುಂಡುಗಳು, ಬಟ್ಟೆ, ಬೆಡ್‌ಶೀಟ್, ಫಾಸ್ಟ್‌ಫುಡ್, ಪಾತ್ರೆಗಳು, ಟೀ ಅಂಗಡಿಗಳಲ್ಲಿ ಹೆಚ್ಚು ವ್ಯಾಪಾರ ನಡೆದಿದೆ ಎಂದು ವರದಿ ತಿಳಿಸಿದೆ.
ಆಟಿಕೆಗಳ ಅಂಗಡಿ ಇರಿಸಿದ್ದ ವಿರೇಂದರ್ ಬಿಂದ್ ಎನ್ನುವವರು ಪಿಟಿಐ ಜತೆ ಮಾತನಾಡಿ, 'ಆರಂಭದಲ್ಲಿ ಒಂದು ಆಟಿಕೆಯನ್ನು ₹60ಗೆ ಮಾರುತ್ತಿದ್ದೆ, ಬಳಿಕ ₹70 ಹೇಳಿದರೂ ಜನ ಕೊಂಡುಕೊಳ್ಳುತ್ತಿದ್ದರು. ಇದರಿಂದ ₹10 ಹೆಚ್ಚುವರಿ ಉಳಿತಾಯವಾಗುತ್ತಿತ್ತು' ಎಂದಿದ್ದಾರೆ.
ದೋಣಿ ನಡೆಸುವವರ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬರು ಮಾತನಾಡಿ, 'ನನ್ನ ತಂದೆ ಜನರನ್ನು ದೋಣಿಯಲ್ಲಿ ಕೂರಿಸಿಕೊಂಡು ಸಂಗಮದಲ್ಲಿ ಸಾಗುತ್ತಿದ್ದರು, ನಾನು ಫೋಟೊಗ್ರಫಿ ಮಾಡುತ್ತಿದ್ದೆ. ತಕ್ಷಣ ಪ್ರಿಂಟ್ ತೆಗೆದುಕೊಡುವ ಯಂತ್ರ ಬಳಸಿಕೊಂಡು ದೋಣಿಯಲ್ಲಿ ಸಾಗುವವರ ಫೋಟೊ ತೆಗೆದು ಅಲ್ಲಿಯೇ ಪ್ರಿಂಟ್ ತೆಗೆದುಕೊಡುತ್ತಿದ್ದೆ. ಇದರಿಂದ ದಿನಕ್ಕೆ ₹5ರಿಂದ 6 ಸಾವಿರ ದುಡಿಯುತ್ತಿದ್ದೆ. ಒಂದು ಫೋಟೊಗೆ ₹50 ಕೇಳುತ್ತಿದ್ದೆ' ಎಂದಿದ್ದಾರೆ.
ಗಿಗ್ ಕೆಲಸದಿಂದ ಲಾಭ ಪಡೆದ ಮನ್ಶು ಎನ್ನುವವರು ಮಾತನಾಡಿ, 'ಕುಟುಂಬದೊಂದಿಗೆ ಚಹಾದ ಅಂಗಡಿ ಇಟ್ಟುಕೊಂಡಿದ್ದೆ, ಚಹಾದ ಜೊತೆಗೆ ಮ್ಯಾಗಿ, ನೂಡಲ್ಸ್ ಸಹ ಮಾರುತ್ತಿದ್ದೆವು, ಸಂಜೆ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತಿತ್ತು' ಎಂದು ಹೇಳಿದ್ದಾರೆ.
ಅಭಿಷೇಕ್ ಎನ್ನುವವರು ಮಾತನಾಡಿ, 'ನಾನು ಮೂಲತಃ ಟ್ರಾನ್ಸ್‌ಪೋರ್ಟ್ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತೇನೆ, ಮಹಾಕುಂಭ ಮೇಳದಲ್ಲಿ ಪವಿತ್ರ ದಾರಗಳನ್ನು ಮಾರಾಟ ಮಾಡಲು ಆರಂಭಿಸಿದ್ದೆ. ಹಳದಿ, ಕೆಂಪು, ಕಪ್ಪು, ಕೇಸರಿ ಬಣ್ಣದ ದಾರಗಳನ್ನು ಬನಾಸರಸ್‌ನಿಂದ ತಲಾ ₹3ಕ್ಕೆ ಖರೀದಿಸಿಕೊಂಡು ಬಂದು ಇಲ್ಲಿ ತಲಾ ₹10ರಂತೆ ಮಾರಾಟ ಮಾಡುತ್ತಿದ್ದೆ. ಹೀಗಾಗಿ ₹7 ಉಳಿತಾಯ ಆಗುತ್ತಿತ್ತು' ಎಂದಿದ್ದಾರೆ.