ಠಾಣೆ: 17 ವರ್ಷದ ಮಗಳನ್ನು ಮಹಾರಾಷ್ಟ್ರದ ಠಾಣೆ ರೈಲ್ವೆ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡಿಸಿದ ಆರೋಪದಲ್ಲಿ ದಂಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಸೋಮವಾರ ರಾತ್ರಿ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹದಿಹರೆಯದ ಬಾಲಕಿ ಭಿಕ್ಷೆ ಬೇಡುತ್ತಿರುವುದು ಮಕ್ಕಳ ಕಲ್ಯಾಣ ತಂಡದ ಸದಸ್ಯರ ಕಣ್ಣಿಗೆ ಬಿದ್ದಿತ್ತು.ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಲ್ವಾ ಪ್ರದೇಶದಲ್ಲಿ ವಾಸಿಸುತ್ತಿದ್ದ ದಂಪತಿ, ತಮ್ಮ ಮಗಳನ್ನು ನಿಲ್ದಾಣದಲ್ಲಿ ಭಿಕ್ಷೆ ಬೇಡಿಸಿ, ಅದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರು ಎಂದು ಠಾಣೆ ಸರ್ಕಾರಿ ರೈಲ್ವೆ ಪೊಲಿಸ್‌ನ ಹಿರಿಯ ಇನ್ಸ್‌ಪೆಕ್ಟರ್ ಅರ್ಚನಾ ಧುಸಾನೆ ಹೇಳಿದ್ದಾರೆ.
ಬಾಲಕಿಗೆ ಮಾದಕ ಪಾನೀಯ ಸೇವಿಸುವಂತೆಯೂ ಅವರು ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯನ್ನು ರಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ. ಬಾಲ ನ್ಯಾಯ ಕಾಯ್ದೆಯಡಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.