ಮುಂಬೈ: ಡಿಪೋದಲ್ಲಿ ನಿಂತಿದ್ದ ಬಸ್ ಒಳಗೆ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಕೃತ್ಯವನ್ನು ಖಂಡಿಸಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಘಟನೆ ಕುರಿತು ತನಿಖೆ ನಡೆಸಿ ಆರೋಪಿಯನ್ನು ಶೀಘ್ರ ಬಂಧಿಸುವಂತೆ ನಿರ್ದೇಶಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಸ್ವಾರ್ಗೇಟ್ ಬಸ್ ನಿಲ್ದಾಣದಲ್ಲಿ ನಡೆದ ಅತ್ಯಾಚಾರ ಘಟನೆ ನಾಗರಿಕ ಸಮಾಜದಲ್ಲಿ ಅತ್ಯಂತ ದುರದೃಷ್ಟಕರ, ದುಃಖಕರ, ಕೋಪೋದ್ರಿಕ್ತ ಮತ್ತು ನಾಚಿಗೇಡಿನ ಸಂಗತಿ.
ಆರೋಪಿ ಮಾಡಿರುವ ಅಪರಾಧವನ್ನು ಕ್ಷಮಿಸಲಾಗದು. ಅವನಿಗೆ ಮರಣದಂಡನೆಗಿಂತ ಬೇರೆ ಶಿಕ್ಷೆ ಇಲ್ಲ. ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿ ತನಿಖೆ ನಡೆಸಲು ಮತ್ತು ಆರೋಪಿಯನ್ನು ತಕ್ಷಣ ಬಂಧಿಸಲು ನಾನು ಪುಣೆ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದೇನೆ' ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸಹ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ಪವಾರ್ ಹೇಳಿದ್ದಾರೆ.
'ಆರೋಪಿಯನ್ನು ಪೊಲೀಸರು ಆದಷ್ಟು ಬೇಗ ಬಂಧಿಸಿ ಕಾನೂನಿನ ಪ್ರಕಾರ ಸಾಧ್ಯವಾದಷ್ಟು ಕಠಿಣ ಶಿಕ್ಷೆ ವಿಧಿಸುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಮಹಾರಾಷ್ಟ್ರದ ನನ್ನ ಎಲ್ಲಾ ಸಹೋದರರು, ಸಹೋದರಿಯರು ಮತ್ತು ತಾಯಂದಿರಿಗೆ ನಾನು ಭರವಸೆ ನೀಡುತ್ತೇನೆ' ಎಂದು ಅವರು ತಿಳಿಸಿದ್ದಾರೆ
ಮಂಗಳವಾರ ಬೆಳಿಗ್ಗೆ ಪುಣೆ ನಗರದ ಸ್ವಾರ್ಗೇಟ್ ಬಸ್ ನಿಲ್ದಾಣದ ನಿರ್ಜನ ಪ್ರದೇಶದಲ್ಲಿ ನಿಂತಿದ್ದ ಬಸ್ ಒಳಗಡೆ 26 ವರ್ಷದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.