ನವದೆಹಲಿ: ಆರೋಪಿಯನ್ನು ಗುರುತಿಸಿದ ಸಾಕ್ಷಿಗಳನ್ನು ವಿಚಾರಣೆ ವೇಳೆ ಹಾಜರುಪಡಿಸದಿದ್ದರೆ, ಆರೋಪಿಯನ್ನು ಗುರುತಿಸುವುದಕ್ಕಾಗಿಯೇ ನಡೆಸಿದ ಪರೇಡ್‌ನ ವರದಿಯು ಸಾಕ್ಷ್ಯಾಧಾರವಾಗುವ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
1999ರಲ್ಲಿ, ಚಲಿಸುತ್ತಿದ್ದ ಬಸ್‌ನಲ್ಲಿ ನಡೆದಿದ್ದ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿರುವ ಪೀಠವು, ಈ ಪ್ರಕರಣದಲ್ಲಿ ಬಸ್ ಚಾಲಕ, ಕಂಡಕ್ಟರ್ ಹಾಗೂ ಕ್ಲೀನರ್‌ನ ನೆರವಿನಿಂದ ಆರೋಪಿ ಗುರುತಿಸುವಿಕೆಯ ಪರೇಡ್ ನಡೆಸಿದ್ದರೂ ವಿಚಾರಣೆ ವೇಳೆ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ ಎಂಬುದನ್ನು ಉಲ್ಲೇಖಿಸಿ, ಈ ರೀತಿ ಹೇಳಿದೆ.
'ಆರೋಪಿಯನ್ನು ಗುರುತಿಸುವ ವ್ಯಕ್ತಿಯನ್ನು ವಿಚಾರಣೆಯ ಸಮಯದಲ್ಲಿ ಸಾಕ್ಷಿಯಾಗಿ ಹಾಜರುಪಡಿಸದಿದ್ದರೆ, ಬೇರೆ ಸಾಕ್ಷಿಯಿಂದ ಗುರುತನ್ನು ಉಳಿಸಿಕೊಳ್ಳಲು ಪರೇಡ್ ವರದಿ ಉಪಯೋಗಕ್ಕೆ ಬರುವುದಿಲ್ಲ ಎಂದು ಪೀಠ ಹೇಳಿದೆ.
ವಿನೋದ್ ಅಲಿಯಾಸ್ ನಸ್ಮುಲ್ಲಾ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿದ ಪೀಠವು, ಈ ಪ್ರಕರಣದಲ್ಲಿ ಅರ್ಜಿದಾರನನ್ನು ಅಪರಾಧಿ ಎಂದು 1999ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪು ಮತ್ತು ಇದನ್ನು 2018ರಲ್ಲಿ ಎತ್ತಿಹಿಡಿದಿದ್ದ ಛತ್ತೀಸಗಢ ಹೈಕೋರ್ಟ್‌ನ ತೀರ್ಪನ್ನು ವಜಾಗೊಳಿಸಿತು. ಇಂತಹ ಪ್ರಕರಣಗಳಲ್ಲಿ ದೃಢೀಕರಿಸುವಂತಹ ಸಾಕ್ಷ್ಯಗಳನ್ನು ಪರಿಗಣಿಸಲು ನ್ಯಾಯಾಲಯವು ಸೂಕ್ಷ್ಮವಾಗಿ ವರ್ತಿಸಬೇಕಿತ್ತು ಎಂದೂ ಪೀಠ ಹೇಳಿದೆ.
ಅಂಬಿಕಾಪುರದ ಸರ್ಗುಜಾ ಸಮೀಪ ರಾಯಪುರದ ಬಸ್‌ನಲ್ಲಿ ನಡೆದಿದ್ದ ಡಕಾಯಿತಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾದ ಎಂಟು ಜನರಲ್ಲಿ ಇಬ್ಬರು ಆರೋಪಿಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಒಬ್ಬರನ್ನು ಸೆಷನ್ಸ್ ನ್ಯಾಯಾಧೀಶರು ಈಗಾಗಲೇ ಖುಲಾಸೆಗೊಳಿಸಿದ್ದಾರೆ ಎಂಬುದನ್ನು ಪೀಠ ಗಮನಿಸಿತು.