ಮುಂಬೈ: ಮುಂಬೈನಲ್ಲಿ 53 ವರ್ಷದ ವ್ಯಕ್ತಿಯೊಬ್ಬರು 'ಗಿಲಾನ್ ಬರೈ ಸಿಂಡ್ರೋಮ್' ನರರೋಗದಿಂದಾಗಿ ಮಂಗಳವಾರ ಮೃತಪಟ್ಟಿದ್ದಾರೆ.
ಇದು ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ, ಗಿಲಾನ್ ಬರೈ ಸಿಂಡ್ರೋಮ್‌ನಿಂದಾಗಿ ಸಂಭವಿಸಿದ ಮೊದಲ ಸಾವಿನ ಪ್ರಕರಣವಾಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಭೂಷಣ್ ಗಗರಾನಿ ತಿಳಿಸಿದ್ದಾರೆ.
'ಇದೀಗ ಮೃತಪಟ್ಟಿರುವ ವ್ಯಕ್ತಿಯು ಸರ್ಕಾರಿ ಆಸ್ಪತ್ರೆಯಲ್ಲಿ 'ವಾರ್ಡ್ ಬಾಯ್' ಆಗಿ ಕೆಲಸ ಮಾಡುತ್ತಿದ್ದರು. ಸ್ವಲ್ಪ ದಿನಗಳ ಹಿಂದೆ ಪುಣೆಗೆ ಭೇಟಿ ನೀಡಿದ್ದ ಅವರು, ತಮ್ಮ ಕಾಲುಗಳು ಸ್ವಾಧೀನ ಕಳೆದುಕೊಂಡಿರುವಂತೆ ಭಾಸವಾಗುತ್ತಿರುವುದಾಗಿ ಹೇಳಿ ಜ.23ರಂದು ಆಸ್ಪತ್ರೆಗೆ ದಾಖಲಾಗಿದ್ದರು' ಎಂದು ನಾಯರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪಾಲ್ಘರ್ ಜಿಲ್ಲೆಯ 16 ವರ್ಷದ ಬಾಲಕಿಯಲ್ಲಿ ಸೋಂಕು ಪತ್ತೆಯಾಗಿದ್ದು, ನಾಯರ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಂಬೈ ಮಹಾನಗರ ಪಾಲಿಕೆಯು ತಿಳಿಸಿದೆ.
ಪುಣೆ ವಲಯದಲ್ಲಿ ಈ ರೋಗವು ಅಧಿಕ ಪ್ರಮಾಣದಲ್ಲಿ ಹರಡಿದ್ದು, ಈಗಾಗಲೇ ಖಚಿತಪಟ್ಟಿರುವ ಸೋಂಕಿತರ ಸಂಖ್ಯೆ ಮಂಗಳವಾರ 197ಕ್ಕೆ ಏರಿಕೆಯಾಗಿದೆ.