ವಾಷಿಂಗ್ಟನ್ ಡಿಸಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಬುಧವಾರ) ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ (ಡಿಎನ್‌ಐ) ತುಳಸಿ ಗಬ್ಬಾರ್ಡ್ ಅವರೊಂದಿಗೆ ಸಭೆ ನಡೆಸಿದ್ದು, ಭಾರತ-ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಗಬ್ಬಾರ್ಡ್ ಪರಸ್ಪರ ಹಸ್ತಲಾಘವ ನೀಡುವ ಮೂಲಕ ಆತ್ಮೀಯವಾಗಿ ಶುಭಾಶಯ ಕೋರಿದ್ದಾರೆ.
ಮಂಗಳವಾರ ಶ್ವೇತಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಗಬ್ಬಾರ್ಡ್ ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಮೋದಿ ಅವರೊಂದಿಗೆ ಸಭೆ ನಡೆಸಿದ್ದಾರೆ.
'ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಲಸಿ ಗಬ್ಬಾರ್ಡ್ ಅವರನ್ನು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಭಾರತ-ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದೇವೆ' ಎಂದು ಮೋದಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಅಮೆರಿಕಕ್ಕೆ ಬಂದಿಳಿದಿದ್ದಾರೆ. ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಸೇರಿದಂತೆ ಇತರ ಅಧಿಕಾರಿಗಳು ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು. ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿ ಅವರ ಮೊದಲ ಅಮೆರಿಕ ಭೇಟಿ ಇದಾಗಿದೆ.
ಅಮೆರಿಕಕ್ಕೆ ಬಂದಿಳಿದ ಬಳಿಕ ಮೋದಿ ಬ್ಲೇರ್ ಹೌಸ್‌ಗೆ ಭೇಟಿ ನೀಡಿದ್ದರು. ಇದೇ ವೇಳೆ ಭಾರತೀಯ ಸಮುದಾಯದವರು ಮೋದಿ ಅವರನ್ನು ಸ್ವಾಗತಿಸಿದ್ದರು. 'ಭಾರತ್ ಮಾತಾ ಕಿ ಜೈ', 'ಮೋದಿ.. ಮೋದಿ..' ಎಂದು ಘೋಷಣೆ ಕೂಗಿದ್ದರು.
'ಚಳಿಗಾಲದ ಚಳಿಯಲ್ಲಿ ಬೆಚ್ಚಗಿನ ಸ್ವಾಗತ. ಶೀತ ಹವಾಮಾನದ ಹೊರತಾಗಿಯೂ, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ಸಮುದಾಯದವರು ನನ್ನನ್ನು ವಿಶೇಷ ಸ್ವಾಗತದೊಂದಿಗೆ ಸ್ವಾಗತಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು' ಎಂದು ಮೋದಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.