ಢಾಕಾ: ಬಾಂಗ್ಲಾದೇಶದ ಕೋಕ್ಸ್ ಬಜಾರ್ ನಗರದಲ್ಲಿರುವ ವಾಯುನೆಲೆ ಮೇಲೆ ದಿಢೀರನೆ ದಾಳಿ ನಡೆಯಿತು. ಭದ್ರತಾ ಪಡೆಗಳು ಸೋಮವಾರ ದಾಳಿಕೋರರನ್ನು ಹಿಮ್ಮೆಟ್ಟಿಸಿದವು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
'ದುಷ್ಕರ್ಮಿಗಳು ವಾಯುನೆಲೆಯ ಮೇಲೆ ದಿಢೀರ್ ದಾಳಿ ನಡೆಸಿದರು.
ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಸಾರ್ವಜನಿಕ ಸಂಪರ್ಕ ಆಂತರಿಕ ಸೇವೆ ನಿರ್ದೇಶನಾಲಯ (ಐಎಸ್‌ಪಿಆರ್) ತಿಳಿಸಿದೆ.
ಸ್ಥಳೀಯ ವರ್ತಕರೊಬ್ಬರು ಮೃತಪಟ್ಟಿದ್ದಾರೆ ಎಂದು ಉಪ ಆಯುಕ್ತ ಮಹಮ್ಮದ್ ಸಲಾಹುದ್ದೀನ್ ತಿಳಿಸಿದರು.
ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ ಸ್ಥಳೀಯರನ್ನು ಸ್ಥಳಾಂತರಿಸಬೇಕಾಗುತ್ತದೆ. ಇದಕ್ಕೆ ಕೆಲವು ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಕಾರಣದಿಂದ ದಾಳಿ ನಡೆದಿರಬಹುದು ಎಂದು ವರದಿಯಾಗಿದೆ.