ಕಾಸರಗೊಡು: ಕಳೆದ ಕೆಲವು ವಾರಗಳಿಂದ ಕೊಳತ್ತೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಜನವಾಸ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಚಿರತೆಯನ್ನು ಬೋನಿನ ಮೂಲಕ ಸೆರೆಹಿಡಿಯಲಾಗಿದ್ದು, ಇತರ ಪ್ರದೇಶದಲ್ಲಿರುವ ಚಿರತೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಈ ಬಗ್ಗೆ ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಡಿಎಫ್‍ಒ ಕೆ. ಅಶ್ರಫ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಆಧುನಿಕ ಕ್ಯಾಮೆರಾ ಟ್ರ್ಯಾಪ್‍ಗಳು, ಹೆಲ್ಮೆಟ್‍ಗಳು ಮತ್ತು ಗುರಾಣಿಗಳು ಲಭಿಸುವಂತೆ ಮಾಡಲಾಗಿದೆ. ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಎನ್‍ಟಿಸಿಎ ಮಾರ್ಗಸೂಚಿಯ ಪ್ರಕಾರ ತಜ್ಞರ ಸಮಿತಿಗಳನ್ನು ರಚಿಸಲಾಗುತ್ತಿದೆ. ಸಮಿತಿಯ ನೇತೃತ್ವದಲ್ಲಿ ಜನರ ಸಭೆಗಳನ್ನು ಕರೆದು ಅಗತ್ಯ ಸಲಹೆಗಳನ್ನು ನೀಡಲಾಗುತ್ತದೆ.
ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಅರಣ್ಯ ಪ್ರದೇಶದ ಸಮೀಪದಲ್ಲಿರುವ ಶಾಲೆಗಳಲ್ಲಿ ಹಾಗೂ ಅವರು ನಡೆದು ಬರುವ ದಾರಿಗಳಲ್ಲಿ ಭದ್ರತೆಯನ್ನು ಬಲಪಡಿಸಲಾಗಿದೆ. ಅರಣ್ಯ ಇಲಾಖೆ, ಪೆÇಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯ ಕಾರ್ಯವನ್ನು ಮತ್ತಷ್ಟು ಬಲಪಡಿಸಲಾಗಿದೆ.
ಚಿರತೆಯ ಬೆದರಿಕೆ ಇರುವ ಪಂಚಾಯಿತಿಗಳಲ್ಲಿ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ವಾಟ್ಸಾಪ್ ಗುಂಪು ರಚಿಸಿ, ಅದರ ಮೂಲಕ ಇತ್ತೀಚಿನ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ. ಈ ಗುಂಪಿನಲ್ಲಿ ನಕಲಿ ಸುದ್ದಿಗಳು ಬಂದಲ್ಲಿ ಅವುಗಳನ್ನು ಗುರುತಿಸಿ ಆ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಲಾಗುವುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.