ತಿರುವನಂತಪುರ: ಕೇರಳ ಕಾಂಗ್ರೆಸ್ ಘಟಕದ ಪುನರ್‌ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಅವರು, 'ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಎಐಸಿಸಿಯ ಯಾವುದೇ ನಿರ್ಧಾರಕ್ಕೆ ತಲೆಬಾಗುತ್ತೇನೆ' ಎಂದು ಬುಧವಾರ ಹೇಳಿದರು.
'ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ತ್ಯಜಿಸುವಂತೆ ಈವರೆಗೆ ಯಾರೂ ಹೇಳಿಲ್ಲ. ಎಐಸಿಸಿ ಸೂಚಿಸಿದರೆ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುತ್ತೇನೆ' ಎಂದು ಸ್ಪಷ್ಟಪಡಿಸಿದರು.
ಪಕ್ಷದ ಪುನರ್ ಸಂಘಟನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
'ನನ್ನ ಬಳಿ ಯಾವುದೇ ದೂರುಗಳಿಲ್ಲ. ನನ್ನ ಕೆಲಸದ ಬಗ್ಗೆ ತೃಪ್ತಿ ಇದೆ. ಪಕ್ಷವು ಪ್ರಮುಖ ಹುದ್ದೆಗಳನ್ನು ನನಗೆ ನೀಡಿದೆ' ಎಂದು ಹೇಳಿದರು.
2026ರ ವಿಧಾನಸಭೆ ಚುನಾವಣೆ ಮತ್ತು ಪ್ರಸಕ್ತ ವರ್ಷ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೇರಳ ಕಾಂಗ್ರೆಸ್ ಘಟಕದ ಪುನರ್‌ರಚನೆಗೆ ಎಐಸಿಸಿ ಯೋಜನೆ ರೂಪಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ರಾಜ್ಯ ನಾಯಕರ ಜತೆ ಚರ್ಚೆ:
ಮುಂಬರುವ ಚುನಾವಣೆಗಳ ಸಿದ್ಧತೆ ಬಗ್ಗೆ ಚರ್ಚಿಸಲು ಸಂಸದರು ಸೇರಿದಂತೆ ರಾಜ್ಯದ ಪ್ರಮುಖ ನಾಯಕರೊಂದಿಗೆ ಹೈಕಮಾಂಡ್ ಗುರುವಾರ ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.