ಕೋಝಿಕ್ಕೋಡ್: ಪ್ರಥಮ ದರ್ಜೆ(ಒಂದನೇ ತರಗತಿ) ಪ್ರವೇಶಕ್ಕೆ ಪರೀಕ್ಷೆಗಳು ಅಥವಾ ಸಂದರ್ಶನಗಳಿಗೆ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಪುನರುಚ್ಛರಿಸಿದ್ದಾರೆ. ಶಾಲಾ ಪ್ರವೇಶಕ್ಕಾಗಿ ವೇಳಾಪಟ್ಟಿ ಮತ್ತು ಸುತ್ತೋಲೆಯನ್ನು ಬಿಡುಗಡೆ ಮಾಡಲಾಗುವುದು ಎಂದಿರುವರು.
ಇದನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಹೇಳಿದರು. ಕೆಎಸ್‍ಟಿಎ ರಾಜ್ಯ ಸಮ್ಮೇಳನದಲ್ಲಿ ಸಚಿವರು ಮಾತನಾಡುತ್ತಿದ್ದರು.
ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ರಾಜ್ಯವು ಸಮಗ್ರ ಶಿಕ್ಷಣ ಗುಣಮಟ್ಟದ ಯೋಜನೆಯನ್ನು ಜಾರಿಗೆ ತರುತ್ತದೆ. ಈ ಬಾರಿ ಎಂಟನೇ ತರಗತಿಯಲ್ಲಿ ಕನಿಷ್ಠ ವಿಷಯವನ್ನು ಜಾರಿಗೆ ತರಲಾಗುವುದು. ಇದನ್ನು ಮುಂದಿನ ವರ್ಷ ಒಂಬತ್ತನೇ ತರಗತಿಯಲ್ಲಿ ಮತ್ತು ನಂತರ ಹತ್ತನೇ ತರಗತಿಯಲ್ಲಿ ಜಾರಿಗೆ ತರಲಾಗುವುದು. ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಬಾರದು ಎಂಬುದು ರಾಜ್ಯ ಸರ್ಕಾರದ ನಿಲುವು. ಕನಿಷ್ಠ ಅಂಕಗಳನ್ನು ಪಡೆಯದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ತರಗತಿಗಳನ್ನು ಒದಗಿಸಲಾಗುವುದು. ವಿದ್ಯಾರ್ಥಿ ‘ಅನುತ್ತೀರ್ಣ’ ಎಂಬುದಿಲ್ಲ ಎಂದು ಸಚಿವರು ಹೇಳಿದರು.
ಎಲ್ಲಾ ಶಾಲೆಗಳಲ್ಲಿ ರ್ಯಾಗಿಂಗ್ ವಿರೋಧಿ ಸೆಲ್ ಅಳವಡಿಸಲಾಗುವುದು. ಮಾನ್ಯತೆ ಪಡೆಯದ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮಾನದಂಡಗಳನ್ನು ಪೂರೈಸದ ಶಾಲೆಗಳಿಗೆ ಅನುಮತಿ ನೀಡಲಾಗುವುದಿಲ್ಲ.
ತಿರುವನಂತಪುರದ ಕುಟ್ಟಿಚಲ್‍ನಲ್ಲಿ ಶಾಲಾ ಬಾಲಕನ ಆತ್ಮಹತ್ಯೆ ಪ್ರಕರಣದಲ್ಲಿ ಗುಮಾಸ್ತನೊಬ್ಬ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಆತನನ್ನು ಅಮಾನತುಗೊಳಿಸಲಾಗಿದೆ. ಎರ್ನಾಕುಳಂನಲ್ಲಿ ಫ್ಲಾಟ್‍ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಗುವಿನ ಪ್ರಕರಣದಲ್ಲೂ ಕಠಿಣ ಕ್ರಮ ಕೈಗೊಳ್ಳಲಾಯಿತು. ಆ ಶಾಲೆಗೆ ಎನ್.ಒ.ಸಿ ಇದ್ದಿರಲಿಲ್ಲ ಎಂದು ಸಚಿವರು ಗಮನಸೆಳೆದರು.